ಹೈದರಾಬಾದ್(ತೆಲಂಗಾಣ): ದೇಶದಲ್ಲಿ ಉಂಟಾಗುವ ಮೇಘಸ್ಫೋಟಗಳ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಶಂಕೆ ಇದೆ ಎಂದು ಕೆಸಿಆರ್ ಹೇಳಿದ್ದಾರೆ.
ಭದ್ರಾದ್ರಿ-ಕೊತ್ತಗುಡೆಂ ಜಿಲ್ಲೆಯ ಪ್ರವಾಹ ಪೀಡಿತ ಭದ್ರಾಚಲಂ ಪಟ್ಟಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಘಸ್ಫೋಟಗಳ ಹಿಂದೆ ಹೊಸ ತಂತ್ರಗಳು ಅಡಗಿವೆ. ಅದರ ಸುತ್ತಲೂ ಪಿತೂರಿಗಳಿವೆ ಎಂದು ಹೇಳಲಾಗುತ್ತಿದೆ. ಅದು ಎಷ್ಟರಮಟ್ಟಿಗೆ ನಿಜವೋ ನನಗೆ ಗೊತ್ತಿಲ್ಲ. ಕೆಲವು ವಿದೇಶಗಳು ಉದ್ದೇಶಪೂರ್ವಕವಾಗಿ ನಮ್ಮ ದೇಶದಲ್ಲಿ ಮೇಘಸ್ಫೋಟಗಳನ್ನು ಮಾಡುತ್ತಿವೆ ಎಂದು ಸಂಶಯ ವ್ಯಕ್ತಪಡಿಸಿದರು.
ಅಲ್ಲದೇ, ಮೇಘಸ್ಫೋಟಗಳು ಮೊದಲಿಗೆ ಲೇಹ್ (ಲಡಾಖ್)ನಲ್ಲಿ ನಡೆಯುತ್ತಿದ್ದವು. ನಂತರ ಇಂತಹ ಮೇಘಸ್ಫೋಟಗಳು ಉತ್ತರಾಖಂಡದಲ್ಲಿ ಸಂಭವಿಸಿದವು. ಈಗ ಗೋದಾವರಿ ಜಲಾನಯನ ಪ್ರದೇಶದಲ್ಲೂ ಇಂತಹ ವಿಧಾನಗಳನ್ನು ಕಂಡುಕೊಳ್ಳಲಾಗಿದ್ದು, ಇಂತಹ ಕರಾಳ ಮುಖದ ಬಗ್ಗೆ ಮಾಹಿತಿ ನಮಗೆ ಸಿಕ್ಕಿದೆ. ಏನೇ ಆಗಲಿ, ಹವಾಮಾನ ಬದಲಾವಣೆಯಿಂದ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ. ಆದ್ದರಿಂದ, ನಾವು ನಮ್ಮ ಜನರನ್ನು ರಕ್ಷಿಸಬೇಕಾಗಿದೆ ಎಂದು ಕೆಸಿಆರ್ ಹೇಳಿದರು.
ಇದೇ ವೇಳೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಮತ್ತು ಭದ್ರಾಚಲಂ ಪಟ್ಟಣದಲ್ಲಿ ಪರಿಹಾರಕ್ಕೆ ಕಾರ್ಯಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಲಾಗುವುದು. ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ರೂಪಾಯಿ ಪರಿಹಾರ ಹಣ ಮತ್ತು 20 ಕೆಜಿ ಅಕ್ಕಿಯನ್ನು ತಕ್ಷಣವೇ ನೀಡಲಾಗುವುದು ಎಂದು ಸಿಎಂ ಕೆಸಿಆರ್ ಘೋಷಿಸಿದರು.
ಇದನ್ನೂ ಓದಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ - ವಿಡಿಯೋ