ಮುಂಬೈ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಹಸಿವು, ಬಡತನ, ನಿರುದ್ಯೋಗ ಮತ್ತು ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟಿನಂತಹ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಮಾನ ಮನಸ್ಕ ಪಕ್ಷಗಳು ಕೈಜೋಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ತೆಲಂಗಾಣ ರೈತರ ಕಲ್ಯಾಣಕ್ಕಾಗಿ ಉತ್ತಮ ಕ್ರಮಗಳನ್ನು ಕೈಗೊಂಡಿದ್ದು, ದೇಶದ ಇತರ ಭಾಗಗಳಿಗೆ ಮಾದರಿಯಾಗಿದೆ ಎಂದು ಪವಾರ್ ಹೊಗಳಿದರು. ನಮ್ಮ ಗಮನ ಅಭಿವೃದ್ಧಿಯತ್ತ ಮಾತ್ರ, ನಾವು ಮತ್ತೊಮ್ಮೆ ಈ ಕಾರಣಕ್ಕೆ ಭೇಟಿಯಾಗುತ್ತೇವೆ ಎಂದು ಸಿಎಂ ಕೆಸಿಆರ್ ಹೇಳಿದರು.
ಇದನ್ನೂ ಓದಿ: ಫ್ಲೀಟ್ ರಿವ್ಯೂ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶಾಖಪಟ್ಟಣಕ್ಕೆ ಆಗಮನ
ಮಧ್ಯಾಹ್ನ ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅವರ ಅಧಿಕೃತ ನಿವಾಸ 'ವರ್ಷ'ದಲ್ಲಿ ಭೇಟಿಯಾದ ನಂತರ ರಾವ್ ಅವರು ಪವಾರ್ ಅವರ ದಕ್ಷಿಣ ಮುಂಬೈ ನಿವಾಸ ಸಿಲ್ವರ್ ಓಕ್‌ಗೆ ಪ್ರಯಾಣಿಸಿದರು. ಪವಾರ್ ಅವರೊಂದಿಗೆ ಮಾಧ್ಯಮಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ರಾವ್, ಎನ್‌ಸಿಪಿ ಮುಖ್ಯಸ್ಥರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಚಳವಳಿಯನ್ನು ಬೆಂಬಲಿಸಿದ್ದರು ಎಂದು ಸ್ಮರಿಸಿದರು.
ನಾನು ಶರದ್ ಪವಾರ್ ಅವರೊಂದಿಗೆ ರಾಜಕೀಯ ಚರ್ಚೆಯನ್ನು ನಡೆಸಲು ಮತ್ತು 75 ವರ್ಷಗಳ ಸ್ವಾತಂತ್ರ್ಯದ ನಂತರ ದೇಶವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಕುರಿತು ಚರ್ಚಿಸಲು ಬಂದಿದ್ದೇನೆ. ನಾವು ಅಗತ್ಯವಿರುವ, ಇದುವರೆಗೆ ಮಾಡದಿರುವ ಬದಲಾವಣೆಗಳನ್ನು ತರುವ ಅಗತ್ಯತೆಯ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ರಾವ್ ಹೇಳಿದರು.