ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಜನತೆ ಬಿಆರ್‌ಎಸ್ ಆಡಳಿತದಿಂದ ಬೇಸತ್ತಿದ್ದಾರೆ. ಈಗ ಆ ಪಕ್ಷದ ಆಡಳಿತದಿಂದ ಜನತೆ ಮುಕ್ತಿ ಬಯಸಿದ್ದಾರೆ. ಅಲ್ಲದೇ, ಏಳು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ನಿಂದಲೂ ಜನ ಮುಕ್ತಿ ಬಯಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಗೆಲ್ಲಿಸಲಿದ್ದಾರೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನ.30ರಂದು ಮತದಾನ ನಡೆಯಲಿದೆ. ಇಂದು ಕಾಮರೆಡ್ಡಿ ಜಿಲ್ಲೆಯಲ್ಲಿ ಬಿಜೆಪಿ ಪರವಾಗಿ ಸಾರ್ವಜನಿಕ ಸಭೆಯ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಬಿಆರ್‌ಎಸ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಕೆಸಿಆರ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ವೆಂಕಟರಮಣ ರೆಡ್ಡಿ ಕಣದಲ್ಲಿದ್ದಾರೆ.
ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಸೋಲಿಸುವಂತೆ ಕರೆ ನೀಡಿದ ಅವರು, ತೆಲಂಗಾಣ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಿದೆ. ಬಿಜೆಪಿ ಹೇಳಿದನ್ನು ಖಂಡಿತ ಈಡೇರಿಸುತ್ತೇವೆ ಎಂದು ಹೇಳಿದರು.
ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದವರಿಗೆ ಅತಿ ಹೆಚ್ಚು ಸಚಿವ ಸ್ಥಾನ ನೀಡಲಾಗಿದೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಕ್ರಮ ವಹಿಸಲಾಗಿದೆ. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹಿಂದುಳಿದ ವರ್ಗಗಳು ಮತ್ತು ದಲಿತರ ಅಭಿವೃದ್ಧಿಗೆ ಏನೂ ಮಾಡಿಲ್ಲ. ದಲಿತರೊಬ್ಬರನ್ನು ಸಿಎಂ ಮಾಡುವ ಕೆಸಿಆರ್ ಭರವಸೆ ಏನಾಯಿತು ಎಂದು ಪ್ರಶ್ನಿಸಿದ ಮೋದಿ, ಬಿಜೆಪಿ ಸರ್ಕಾರ ಬಂದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುವುದು ಎಂದು ಪುನರುಚ್ಚರಿಸಿದರು.
ತೆಲಂಗಾಣದಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಮಾದಿಗ ಉಪಜಾತಿಗಳ ವರ್ಗೀಕರಣಕ್ಕಾಗಿ ಬಿಜೆಪಿ ಬದ್ಧವಾಗಿದೆ. ಮಾದಿಗ ವರ್ಗೀಕರಣಕ್ಕೆ ಸಮಿತಿ ರಚಿಸಲಿದೆ. ಈ ಸಮಿತಿಯು ಸಮುದಾಯಕ್ಕೆ ನ್ಯಾಯ ಒದಗಿಸಲಿದೆ. ಬಿಆರ್‌ಎಸ್ ಸರ್ಕಾರ ರೈತರಿಗೂ ಮೋಸ ಮಾಡಿದೆ. ಯೋಜನೆಗಳ ಹೆಸರಿನಲ್ಲಿ ಬಿಆರ್‌ಎಸ್ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಬಿಆರ್‌ಎಸ್ ನಾಯಕರು ಹಣ ಮಾಡಲು ಬಯಸಿದರೆ ಹೊಸ ಯೋಜನೆಗಳನ್ನು ರಚಿಸಿ ಲೂಟಿ ಮಾಡುತ್ತಾರೆ ಎಂದು ದೂರಿದರು.
ಬಿಜೆಪಿಗೆ ರೈತರ ಹಿತ ಕಾಪಾಡುವುದು ಗೊತ್ತು. ಇಲ್ಲಿಯವರೆಗೆ ನಾವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ರೈತರ ಖಾತೆಗಳಿಗೆ 2.75 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಿದ್ದೇವೆ. ರಾಜ್ಯದ 40 ಲಕ್ಷ ರೈತರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಬಿಜೆಪಿ ಕೆಲಸ ಮಾಡುತ್ತಿದೆ. 300 ರೂ.ಗೆ ಯೂರಿಯಾ ಪೂರೈಕೆ ಮಾಡುತ್ತಿದ್ದೇವೆ ಎಂದು ಮೋದಿ ತಿಳಿಸಿದರು.
ತೆಲಂಗಾಣದಲ್ಲಿ ಯುವ ವಿರೋಧಿ ಸರ್ಕಾರದಿಂದ ನಿರುದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಆರ್‌ಎಸ್ ಸರ್ಕಾರ ವರ್ಷಗಳಿಂದ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಕರನ್ನು ವಂಚಿಸಿದೆ. ಟಿಎಸ್ಪಿಎಸ್ಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಯುವಕರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಬರಲಿದೆ: ಹೈದರಾಬಾದ್ನಲ್ಲಿ ಡಿಕೆಶಿ ವಿಶ್ವಾಸ