ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆಯ ಕಾಮರೆಡ್ಡಿ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶವೊಂದು ಹೊರ ಬಂದಿದೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಿಎಂ ಚಂದ್ರಶೇಖರ್ ರಾವ್ ಹಾಗೂ ಕಾಂಗ್ರೆಸ್ನ ಸಿಎಂ ಹುದ್ದೆಯ ಆಕಾಂಕ್ಷಿ, ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿಯ ಅಭ್ಯರ್ಥಿ ವೆಂಕಟರಮಣ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಆರ್ಎಸ್ ಸೋಲಿನ ಸುಳಿಗೆ ಸಿಲುಕಿದೆ. ಪ್ರತಿಪಕ್ಷ ಕಾಂಗ್ರೆಸ್ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ಬಳಿಕ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮ್ಯಾಜಿಕ್ ನಂಬರ್ 60 ಆಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕಾಂಗ್ರೆಸ್ 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಬಿಆರ್ಎಸ್ 39 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 8 ಕಡೆ ಹಾಗೂ ಎಐಎಂಐಎಂ 7 ಕ್ಷೇತ್ರಗಳು ಹಾಗೂ ಒಂದು ಕಡೆ ಸಿಪಿಐ ಮುನ್ನಡೆಯಲ್ಲಿದೆ.
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಿಎಂ ಕೆಸಿಆರ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆಯಿಂದ ಹೆಚ್ಚು ಮಹತ್ವ ಪಡೆದಿದೆ. ಇಬ್ಬರು ಉನ್ನತ ನಾಯಕರ ವಿರುದ್ಧ ಬಿಜೆಪಿಯಿಂದ ವೆಂಕಟರಮಣ ರೆಡ್ಡಿ ಕಣಕ್ಕೆ ಇಳಿದಿದ್ದರು. ಇದುವರೆಗೆ ರೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದರು.
ಆದರೆ, ಕೊನೆಯಲ್ಲಿ ಕಮಲ ಪಕ್ಷದ ಅಭ್ಯರ್ಥಿಗೆ ಅಚ್ಚರಿ ತಿರುವು ಸಿಕ್ಕಿದ್ದು, ವೆಂಕಟರಮಣ ರೆಡ್ಡಿ 3,544 ಮುನ್ನಡೆ ಸಾಧಿಸಿದ್ದಾರೆ. ರೇವಂತ್ ರೆಡ್ಡಿ ಎರಡನೇ ಸ್ಥಾನ ಹಾಗೂ ಸಿಎಂ ಕೆಸಿಆರ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಮತ್ತೊಂದೆಡೆ, ರೇವಂತ್ ರೆಡ್ಡಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಕೆಸಿಎರ್ ಸಹ ಗಜ್ವೆಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಅವರು ಮುನ್ನಡೆ ಸಾಧಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಕೆಸಿಆರ್ ರಾಜೀನಾಮೆ ಸಲ್ಲಿಕೆ: ವಿಧಾನಸಭೆ ಚುನಾವಣೆಯಲ್ಲಿ ಬಿಆರ್ಎಸ್ ಸೋಲಿನ ಬಳಿಕ ಸಿಎಂ ಕೆಸಿಆರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಂಜೆ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಬಿಆರ್ಎಸ್ ನಾಯಕ ರವಾನಿಸಿದ್ಧಾರೆ. ಇನ್ನು, ಕೆಸಿಆರ್ ಸಂಪುಟದಲ್ಲಿ ಸಚಿವರಾಗಿದ್ದ ದಯಾಕರ್ ರಾವ್ ಮತ್ತು ಪುವ್ವಾಡ ಅಜಯ್ ಕುಮಾರ್ ಸೇರಿದಂತೆ ಆರು ಸಚಿವರು ಸಹ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುಳುಗಿಸಿದ 'ಮಹದೇವ್'; ಮೋದಿ ಅಸ್ತ್ರಕ್ಕೆ ಸಿಕ್ಕ ಗೆಲುವು!