ಹೈದರಾಬಾದ್: ಜೂನ್ 17 ರಂದು ಸಿಕಂದರಾಬಾದ್ನ ರೈಲು ನಿಲ್ದಾಣದಲ್ಲಿ, ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿಯ ಗುಂಡು ತಗುಲಿ ದಾಮೆರಾ ರಾಕೇಶ್ ಮೃತಪಟ್ಟಿದ್ದರು. ಯುವಕನ ಸಾವಿಗೆ ಪರಿಹಾರವಾಗಿ ಅವರ ಸಹೋದರನಿಗೆ ಉದ್ಯೋಗ ನೀಡುವಂತೆ ತೆಲಂಗಾಣ ಸರ್ಕಾರ ವರಂಗಲ್ ಡಿಸಿಗೆ ಸೂಚಿಸಿ ಆದೇಶ ಹೊರಡಿಸಿದೆ.
ದಾಮೆರ ರಾಕೇಶ್ ಅವರ ಹಿರಿಯ ಸಹೋದರ, ದಾಮೆರ ರಾಮ್ ರಾಜು ಅವರ ಅರ್ಹತೆಗೆ ಅನುಗುಣವಾಗಿ ಅನುಕಂಪದ ಆಧಾರದ ಮೇಲೆ ಸೂಕ್ತ ಹುದ್ದೆಗೆ ನೇಮಿಸಬೇಕು ಎಂದು ಶುಕ್ರವಾರ ರಾತ್ರಿ ಸರ್ಕಾರಿ ಆದೇಶದಲ್ಲಿ ತಿಳಿಸಿದೆ. ವರಂಗಲ್ ಜಿಲ್ಲಾಧಿಕಾರಿಗಳು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಜೂನ್ 17 ರಂದು ಇಲ್ಲಿನ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡುವುರೊಂದಿಗೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ರಾಕೇಶ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಜೂನ್ 17 ರಂದು ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಅಲ್ಲದೇ ವಿದ್ಯಾರ್ಹತೆಗೆ ಅನುಗುಣವಾಗಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನೂ ಕೊಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ: ಮರಗಳ ಸಾಗಣೆಯಿಂದ ಭೂಕುಸಿತ ಭೀತಿ: ಟಿಂಬರ್ ಮಾಫಿಯಾಕ್ಕೆ ಬ್ರೇಕ್ ಹಾಕುವಂತೆ ಆಗ್ರಹ