ಅಹಮದಾಬಾದ್: 2002ರ ಗುಜರಾತ್ ಧಂಗೆ ಹಿಂದೆ ಅಹ್ಮದ್ ಪಟೇಲ್ ಕೈವಾಡವಿದೆ ಎಂದು ಎಸ್‌ಐಟಿ ತಂಡ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ. ಗುಜರಾತ್ ಗಲಭೆ ಮೂಲಕ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್.ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅವರ ಅಂದಿನ ರಾಜಕೀಯ ಸಲಹೆಗಾರ ದಿ. ಅಹ್ಮದ್ ಪಟೇಲ್ ಅವರಿಂದ 30 ಲಕ್ಷ ರೂ. ಹಣ ಪಡೆದಿದ್ದರು. ಗಲಭೆ ಸೃಷ್ಟಿಸಲು ಯೋಜನೆ ರೂಪಿಸಿದ್ದರು.
2002ರ ಗುಜರಾತ್ ಧಂಗೆಯ ನಂತರದ ಪರಿಣಾಮಗಳು ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಅಸ್ಥಿರಗೊಳಿಸಿತು. ಅಂದಿನ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವುದೇ, ಇದರಲ್ಲಿ ಅಮಾಯಕರನ್ನು ಸಿಲುಕಿಸುವುದೇ ಗಲಭೆಯ ಉದ್ದೇಶವಾಗಿತ್ತು ಎಂದು ವಿಶೇಷ ತನಿಖಾ ತಂಡ (SIT) ವರದಿ ಬಹಿರಂಗಪಡಿಸಿದೆ.
2002ರ ಗುಜರಾತ್ ಧಂಗೆ - ಕ್ರಿಮಿನಲ್ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ತಂಡ ರಚಿಸಲಾಗಿದೆ. ತೀಸ್ತಾ, ಶ್ರೀಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಮಿತೇಶ್ ಅಮೀನ್ ಮತ್ತು ಅಮಿತ್ ಪಟೇಲ್, ಎಸ್‌ಐಟಿಯ ಎಸಿಪಿ ಬಿ.ಸಿ.ಸೋಲಂಕಿ ಅವರು ಅಫಿಡವಿಟ್ ಸಲ್ಲಿಸಿದ್ದು, ಆರೋಪಿಗಳು ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದು ಪ್ರಾಯೋಜಿತ ಪಿತೂರಿ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಡಿ ಠಕ್ಕರ್ ಅವರು ಎಸ್‌ಐಟಿ ಮಾಹಿತಿಯನ್ನು ದಾಖಲಿಸಿಕೊಂಡು ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಇನ್ನು ಅಹಮದಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 2ರಂದು ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.
30 ಲಕ್ಷ ರೂ. ಪಡೆದಿದ್ದರು: ಆರೋಪಿಗಳು ಅಹ್ಮದ್ ಪಟೇಲ್ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿದ್ದರು. ಮೊದಲ ಬಾರಿಗೆ 5 ಲಕ್ಷ, ಎರಡು ದಿನಗಳ ನಂತರ 25 ಲಕ್ಷ ರೂ. ಹಣ ಪಡೆದಿದ್ದರು. ಅಹ್ಮದ್ ಪಟೇಲ್ 2020ರಲ್ಲಿ ನಿಧನರಾಗಿದ್ದಾರೆ.
ಪ್ರಕರಣ ಸಂಬಂಧ ನರೇಂದ್ರ ಮೋದಿ ಮತ್ತು ಹಲವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ದಿ. ಎಹ್ಸಾನ್ ಜಾಫ್ರಿ(Ehsan Jafri) ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಇದನ್ನೂ ಓದಿ: ನೇಮಕ ಪತ್ರ ನೀಡದ ಹಿನ್ನೆಲೆ.. 3 ತಿಂಗಳಿಂದ ಪ್ರತಿಭಟನೆ, ಯುವಕರಿಂದ ಸಿಎಂ ಮನೆ ಎದುರು ಆತ್ಮಹತ್ಯೆ ಯತ್ನ!
ಫೆಬ್ರವರಿ 28, 2002ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸಾವನ್ನಪ್ಪಿದ 69 ಜನರಲ್ಲಿ ಎಹ್ಸಾನ್ ಜಾಫ್ರಿ ಸಹ ಒಬ್ಬರು. ಅವರ ಪತ್ನಿಯು, ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ಎಸ್‌ಐಟಿಯ ಕ್ಲೀನ್ ಚಿಟ್ ಬಗ್ಗೆ ಸವಾಲು ಹಾಕಿ ಅರ್ಜಿ ಸಲ್ಲಿಸಿದ್ದರು.
ಫೆಬ್ರವರಿ 27, 2002ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 58 ಯಾತ್ರಾರ್ಥಿಗಳನ್ನು ಸಜೀವವಾಗಿ ಸುಟ್ಟುಹಾಕಿದ ನಂತರ ರಾಜ್ಯಾದ್ಯಂತ ಧಂಗೆಗಳು ಭುಗಿಲೆದ್ದವು. ಇದರಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.