ಹೈದರಾಬಾದ್: ಅಪ್ರಾಪ್ತೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮನೆಗೆಲಸ ಮಾಡುತ್ತಿದ್ದು, ಪಕ್ಕದ ಮನೆಯ ನೇಪಾಳ ಮೂಲದ ಬುದ್ಧಿಮಾನ್ ಕಾಮೆ (53) ಎಂಬ ವ್ಯಕ್ತಿಯಿಂದ 9 ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದಳು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿ ಗರ್ಭಿಣಿಯಾದ ವಿಷಯ ತಿಳಿದ ಆಕೆ ತಾಯಿ ಆಶಾ ಕಾರ್ಯಕರ್ತೆ ಹತ್ತಿರ ನನ್ನ ಮಗಳು ಏಳು ತಿಂಗಳ ಗರ್ಭಿಣಿ, ಪೌಷ್ಟಿಕಾಂಶ ಆಹಾರ ಬೇಕು ಎಂದು ಕೇಳಿದ್ದಾಳೆ. ಬಳಿಕ ಆಶಾ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗರ್ಭ ಧರಿಸಿರುವುದಕ್ಕೆ, ಕಾಮೆ ಕಾರಣ ಎಂದು ಹೇಳಿದ್ದಾಳೆ. ಬಳಿಕ ಆಕೆಯನ್ನು ಸರ್ಕಾರಿ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ನಾನಂತವನಲ್ಲ ಎಂದು ಊರು ಬಿಟ್ಟ ಆರೋಪಿ ಯುವಕ!!
ಅಷ್ಟೇ ಅಲ್ಲದೇ ಬಾಲಕಿ ಮನೆಯ ಮುಂದೆ ವಾಸಿಸುವ ಸಾಯಿಕುಮಾರ್ (25) ಸಹ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ. ಶನಿವಾರ ನಿಲೋಫರ್‌ನಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪೊಲೀಸರು ಆರೋಪಿಗಳ ಡಿಎನ್‌ಎ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.