ಅಹಮದಾಬಾದ್ (ಗುಜರಾತ್): ಒಂದು ಗ್ರಾಮ ಅಭಿವೃದ್ಧಿ ಕಾಣಬೇಕೆ ಎಂದರೆ ರಸ್ತೆ, ಆಸ್ಪತ್ರೆ, ವಿದ್ಯುತ್ ನಂತರ ಮೂಲ ಭೂತ ಸೌಕರ್ಯಗಳು ಇರಬೇಕು. ಇದಾವುದು ಇಲ್ಲದಿದ್ದರೂ ಒಂದು ಶಾಲೆ ಊರಿನಲ್ಲಿದ್ದರೆ ಅಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಶಿಕ್ಷಣ ಮತ್ತು ಶಿಕ್ಷಕ ಮನಸ್ಸು ಮಾಡಿದರೆ ಊರಿನ ಸಾಮಾಜಿಕ ಪರಿಸ್ಥಿತಿಯನ್ನು ಬದಲಾವಣೆ ಮಾಡಬಲ್ಲ. ಶಿಕ್ಷಕರ ದಿನಾಚರಣೆಯಂದು ನಾವು ಅಂತಹ ಬದಲಾವಣೆ ಮಾಡಿದ ಗುರುವಿನ ಪರಿಚಯ ಇಲ್ಲಿ ಮಾಡುತ್ತಿದ್ದೇವೆ.
ಶಿಕ್ಷಣ ಎನ್ನುವುದು ಕೆಲ ವರ್ಷಗಳ ಹಿಂದೆ ಮತ್ತು ಈಗಲೂ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಎಟುಕದ ನಕ್ಷತ್ರವೇ ಆಗಿರುತ್ತದೆ. 20 - 21ನೇ ಶತಮಾನದಲ್ಲಿ ನಾವಿದ್ದೇವೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವೇ ಕಳೆದಿದೆ. ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಬೇಟಿ ಬಚಾವೋ ಬೇಟಿ ಪಡಾವೋ ಅಂತಹ ಯೋಜನೆ ಜಾರಿಗೆ ಬಂದರೂ, ಹೆಣ್ಣಿನ ಬಗ್ಗೆ ಅದೇ ಅಸಡ್ಡೆಗಳು ಕೆಲ ಹಳ್ಳಿಗಳಲ್ಲಿ ಉಳಿದಿದೆ. ಸನಂದ ತಾಲೂಕಿನ ನಲ್ಸರೋವರ ಸಮೀಪದ ಜಂಪ್ ಗ್ರಾಮದ ಶಿಕ್ಷಕರೊಬ್ಬರ ಶ್ರಮದಿಂದ 70 ಬಾಲಕಿಯರು ಓದುತ್ತಿದ್ದ ಶಾಲೆಯಲ್ಲಿ ಈಗ 350 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.
ಜಂಪ್ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರವೀಣಭಾಯ್ ಶಾಲೆಗೆ ಶಿಕ್ಷಕರಾಗಿ ಸೇರಿದಾಗ ಸುತ್ತಮುತ್ತಲಿನ ಹಳ್ಳಿಯಿಂದ ಸುಮಾರು 70 ಹುಡುಗಿಯರು ಮಾತ್ರ ಶಾಲೆಗೆ ಸೇರಿದ್ದರು. ಪ್ರವೀಣಭಾಯ್ ಹೆಣ್ಣುಮಕ್ಕಳ ಶಿಕ್ಷಣದತ್ತ ಗಮನ ಹರಿಸತೊಡಗಿದರು. ಪ್ರವೀಣಭಾಯ್ ಅವರ ಪ್ರಯತ್ನದ ಫಲದಿಂದ ಇಂದು ಶಾಲೆಯ 350 ಕ್ಕೂ ಹೆಚ್ಚು ಹೆಣ್ಣುಮಕ್ಕಳು ಅಧ್ಯಯನದ ಜೊತೆಗೆ ಹಾಕಿ ಆಟದಲ್ಲಿ ಹಳ್ಳಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಸರು ತರುತ್ತಿದ್ದಾರೆ.
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅವಿರತ ಪ್ರಯತ್ನ: ಪ್ರವೀಣಭಾಯ್ ಅವರು ಜಂಪ್ ಗ್ರಾಮದಲ್ಲಿ ಕಳೆದ 18 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೀಣಭಾಯ್ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತೀವ್ರ ಪ್ರಯತ್ನ ಮಾಡಿದರು. ಗ್ರಾಮದ ಜನರಿಗೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವರಿಕೆ ಮಾಡಿದರು. ಇತ್ತೀಚಿಗೆ ಅಲ್ಲಿನ ಹೆಣ್ಣು ಮಕ್ಕಳು ಊರಲ್ಲಷ್ಟೇ ಅಲ್ಲ ಊರಾಚೆಗೂ ಹೋಗಿ ಶಿಕ್ಷಣ ಪಡೆಯುತ್ತಿದ್ದಾರೆ. ಅನೇಕ ಹೆಣ್ಣು ಮಕ್ಕಳು ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಉನ್ನತ ಶಿಕ್ಷನಗಳನ್ನು ಪಡೆದ ಹೆಣ್ಣು ಮಕ್ಕಳು ಇಂದು ಉದ್ಯೋಗ ಮಾಡಿಕೊಂಡು ಸ್ವಂತ ಕಾಲ ನಿಂತಿದ್ದಾರೆ. ಅಲ್ಲದೇ ಇಂದು ಶಾಲೆಯ ಬಾಲಕಿಯರು ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.
"2004ರಲ್ಲಿ ಈ ಶಾಲೆಗೆ ಶಿಕ್ಷಕಿಯಾಗಿ ಸೇರಿದ್ದೆ. ನಾನು ಈ ಶಾಲೆಗೆ ಸೇರುವ ಸಮಯದಲ್ಲಿ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಸುಮಾರು 70 ಹುಡುಗಿಯರು ಮಾತ್ರ ಶಾಲೆಗೆ ಬರುತ್ತಿದ್ದರು. ಆಗ ಈ ಹೆಣ್ಣುಮಕ್ಕಳನ್ನು ಶಿಕ್ಷಣದತ್ತ ಮುಂದೆ ತರಲು ಕ್ರೀಡೆಯತ್ತ ಗಮನ ಹರಿಸುವುದು ಬಹಳ ಮುಖ್ಯ ಎಂಬ ಆಲೋಚನೆ ಬಂದಿತು. ಮಕ್ಕಳಿಗೆ ಹಾಕಿಯನ್ನು ಹೇಳಿಕೊಡಲು ಪ್ರಾರಂಭಿಸಿದೆ. ಇಂದು ಶಾಲೆಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ 350ಕ್ಕೆ ಏರಿದೆ" ಎಂದು ಶಿಕ್ಷಕ ಪ್ರವೀಣಭಾಯ್ ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಸಾಧನೆ: ಈ ಶಾಲೆಯ ವಿದ್ಯಾರ್ಥಿನಿಯರು ಗಾಂಧಿನಗರ, ಸೂರತ್, ಛೋಟೌದೇಪುರದಂತಹ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚಾಂಪಿಯನ್ ಕೂಡ ಆಗಿದ್ದಾರೆ. ಅಲ್ಲದೇ ರಾಷ್ಟ್ರಮಟ್ಟದ ಹಾಕಿ ಸೆಮಿಫೈನಲ್‌ನಲ್ಲಿಯೂ ಭಾಗವಹಿಸಿದ್ದಾರೆ. ಒಂದು ಕಾಲದಲ್ಲಿ ಊರಿನ ಹೆಣ್ಣು ಮಕ್ಕಳು ಶಾಲೆ ಬರುತ್ತಿರಲಿಲ್ಲ. ಆದರೆ ಈಗ ಈ ಹೆಣ್ಣುಮಕ್ಕಳು ಹಾಕಿ ಆಟದಲ್ಲಿ ಶ್ಲಾಘನೀಯ ಸಾಧನೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಪ್ರಶಸ್ತಿ: 2022 ರಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತ ತಂಡವನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪುರಸ್ಕರಿಸಿದರು. ಇದಲ್ಲದೇ ಶಿಕ್ಷಕ ಪ್ರವೀಣಭಾಯ್ ಅವರಿಗೆ ಗುಜರಾತ್ ಶಿಕ್ಷಣ ಸಚಿವರು ವಿದ್ಯಾಗುರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಾಜ್ಯ ಸರಕಾರದ ಡಿಎಲ್ಎಸ್ಎಸ್ ಯೋಜನೆಯಡಿ ಸುಮಾರು ಹದಿನೈದು ಹೆಣ್ಣು ಮಕ್ಕಳು ಓದುತ್ತಿದ್ದಾರೆ.
ಇದನ್ನೂ ಓದಿ: ವಿದ್ಯೆ ಕಲಿಸುವುದಷ್ಟೇ ಶಿಕ್ಷಣದ ಉದ್ದೇಶ ಅಲ್ಲ, ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದು ಶಿಕ್ಷಣದ ಗುರಿ: ಸಿಎಂ