ಹೈದರಾಬಾದ್ : ಸರ್ಕಾರದ ಅಮ್ಮ ವೋಡಿ ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿಯನ್ನು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶರ್ಮಾ ಎಂಬುವರು ನಡುರಸ್ತೆಯಲ್ಲಿಯೇ ಥಳಿಸಿದ್ದು, ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ ವಿಶಾಖಪಟ್ಟಣಂ ಜಿಲ್ಲೆಯ ಕಾಸಿಂಕೋಟ ಮಂಡಲದ ಯಾನುಗು ತುಣಿ ಗ್ರಾಮದ ರೂಪೇಶ್ ಎಂಬ ವಿದ್ಯಾರ್ಥಿ ತನ್ನ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾನೆ. ನಂತರ ನರಸಿಂಗಬಳ್ಳಿ ಗ್ರಾಮದಲ್ಲಿ 9 ನೇ ತರಗತಿಗೆ ದಾಖಲಾಗಿದ್ದಾನೆ.
ಶರ್ಮಾ ಎಂಬುವರು ಯಾನುಗುತುಣಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು, ಅಮ್ಮ ವೋಡಿ ಯೋಜನೆಯ ಹಣ ಬಿಡುಗಡೆಯ ಬಗ್ಗೆ ವಿದ್ಯಾರ್ಥಿ ಹಾಗೂ ಇವರ ನಡುವೆ ಚರ್ಚೆಯಾಗಿದೆ. ನಿಮ್ಮ ತಂದೆ ಈ ಸಂಬಂಧದ ವಿಷಯಕ್ಕೆ ಮತ್ತೆ ತಲೆ ಹಾಕಬಾರದು ಎಂದು ಮುಖ್ಯಾಧ್ಯಾಪಕ ಶರ್ಮಾ ವಿದ್ಯಾರ್ಥಿಗೆ ಆದೇಶಿಸಿದ್ದಾರೆ. ಆದರೆ ಈ ವಿಷಯದಲ್ಲಿ ತಂದೆ ತನ್ನ ಮಾತು ಕೇಳುವುದಿಲ್ಲ ಎಂದು ವಿದ್ಯಾರ್ಥಿಯು ವಾದಿಸಿದ್ದಾನೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಮುಖ್ಯಾಧ್ಯಾಪಕ ಶರ್ಮಾ, ರೂಪೇಶ್ನನ್ನು ಥಳಿಸಿದ್ದಾರೆ.
ಘಟನೆಯ ಬಗ್ಗೆ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಯ ತಂದೆ ತನ್ನ ಇಬ್ಬರು ಮಕ್ಕಳ ಅಮ್ಮ ವೋಡಿ ಯೋಜನೆಗಾಗಿ ಎರಡು ವಿಭಿನ್ನ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಅಕೌಂಟಿಗೆ ಹಣ ಜಮಾ ಆಗಿಲ್ಲ. ವಿದ್ಯಾರ್ಥಿಯ ತಂದೆ ದುರ್ಗರಾವ್ ಅವರಿಗೆ ಒಂದೇ ಖಾತೆಯ ವಿವರ ನೀಡುವಂತೆ ಕೇಳಲಾಗಿತ್ತು ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ತಂದೆಯು ಕುಡಿದು ಬಂದು ಈ ವಿಷಯದಲ್ಲಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿ ರೂಪೇಶ್ ಸಹ ತಮ್ಮೊಂದಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾನೆ ಎಂದು ಮುಖ್ಯಾಧ್ಯಾಪಕ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.