ಚುರು (ರಾಜಸ್ಥಾನ) : ವಿದ್ಯಾರ್ಥಿಯೋರ್ವ ಶಾಲೆಯಲ್ಲಿ ನೀಡಲಾಗಿದ್ದ ಹೋಂ ವರ್ಕ್ ಮಾಡದಿರುವ ತಪ್ಪಿಗಾಗಿ ಶಿಕ್ಷಕನಿಂದ ಹಲ್ಲೆಗೊಳಗಾಗಿ ಪ್ರಾಣ ಬಿಟ್ಟಿದ್ದಾನೆ. ರಾಜಸ್ಥಾನದ ಚುರು ಜಿಲ್ಲೆಯ ಸಲಸರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
13 ವರ್ಷದ ಬಾಲಕ ಶಿಕ್ಷಕನ ಹೊಡೆತಕ್ಕೆ ಬಲಿಯಾಗಿದ್ದಾನೆ. ಹೋಂ ವರ್ಕ್ ಮಾಡದ ವಿದ್ಯಾರ್ಥಿಯನ್ನ ಅಮಾನುಷವಾಗಿ ಥಳಿಸಿರುವ ಕಾರಣ ಆತ ಪ್ರಾಣ ಕಳೆದುಕೊಂಡಿದ್ದಾನೆಂದು ಆರೋಪ ಮಾಡಲಾಗಿದೆ. ಶಿಕ್ಷಕನಿಂದ ಹಲ್ಲೆಗೊಳಗಾದ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿದೆ. ಆದರೆ, ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿರಿ: ಐತಿಹಾಸಿಕ ಸಾಧನೆ ತುದಿಯಲ್ಲಿ ಭಾರತ.. ನಾಳೆ ಬೆಳಗ್ಗೆ 100 ಕೋಟಿ Corona Vaccine ಪೂರ್ಣ ಸಾಧ್ಯತೆ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಾಲಕನ ತಂದೆ ಓಂಪ್ರಕಾಶ್, 13 ವರ್ಷದ ಮಗ ಗಣೇಶ್ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡ್ತಿದ್ದು, ಶಿಕ್ಷಕ ಮನೋಜ್ ಎಂಬುವರು ಅನಗತ್ಯವಾಗಿ ಆತನ ಮೇಲೆ ಹಲ್ಲೆ ನಡೆಸುತ್ತಿದ್ದರಂತೆ.
ಕಳೆದ 15 ದಿನಗಳಲ್ಲಿ 3-4 ಸಲ ಇದಕ್ಕೆ ಸಂಬಂಧಿಸಿದಂತೆ ನನ್ನ ಮುಂದೆ ದೂರು ನೀಡಿದ್ದನು. ಬುಧವಾರ ಕೂಡ ಶಾಲೆಗೆ ತೆರಳಿದಾಗ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.
ಮಗು ಪ್ರಜ್ಞೆ ಕಳೆದುಕೊಂಡಿರುವ ಮಾಹಿತಿ ತಂದೆಗೆ ಗೊತ್ತಾಗುತ್ತಿದ್ದಂತೆ ಶಾಲೆಗೆ ಆಗಮಿಸಿದ್ದರು. ಈ ವೇಳೆ ಶಿಕ್ಷಕರು ಆತ ಸಾವನ್ನಪ್ಪಿರುವಂತೆ ನಟನೆ ಮಾಡ್ತಿದ್ದಾನೆಂದು ಹೇಳಿದ್ದಾರೆ. ಆದರೆ, ಪ್ರಜ್ಞೆ ಬರದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಸಾವನ್ನಪ್ಪಿರುವುದು ಖಚಿತವಾಗಿದೆ.
ಈಗಾಗಲೇ ಆರೋಪಿ ಶಿಕ್ಷಕ ಮನೋಜ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ಪೊಲೀಸರು ಆತನನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.