ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ಮುಖ್ಯಸ್ಥ ರಾಜೇಶ್ ಗೋಪಿನಾಥನ್ ಅವರು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಕಂಪನಿಯ ಅನುಭವಿ ಮತ್ತು ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕೃತಿವಾಸನ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
ಕಳೆದ ಆರು ವರ್ಷಗಳಿಂದ ಚುಕ್ಕಾಣಿ ಹಿಡಿದಿರುವ ಗೋಪಿನಾಥನ್ ಅವರು ಸೆಪ್ಟೆಂಬರ್ 15, 2023 ರ ತನಕ ಸಿಇಒ ಆಗಿ ಮುಂದುವರೆಯಲಿದ್ದಾರೆ. ಆ ನಂತರ ಅಧಿಕೃತವಾಗಿ ಕೆ.ಕೃತಿವಾಸನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಟಿಸಿಎಸ್ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: TCS ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ.ಗೆ ಏರಿಕೆ: ಯಾರಿದ್ದಾರೆ ನಂ.1?
"ರಾಜೇಶ್ ಗೋಪಿನಾಥನ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನೊಂದಿಗೆ 22 ವರ್ಷಗಳ ಕಾಲ ವೃತ್ತಿಜೀವನ ನಡೆಸಿದ್ದಾರೆ. ಕಳೆದ 6 ವರ್ಷಗಳಿಂದ ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ತಮ್ಮ ಇತರೆ ಆಸಕ್ತಿಗಳನ್ನು ಮುಂದುವರಿಸಲು ಕಂಪನಿಯಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ" ಎಂದು ಕಂಪನಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ TCS ಷೇರು ಬೆಲೆ: ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿಗೆ ಏರಿಕೆ!
ಟಿಸಿಎಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಪ್ರತಿಕ್ರಿಯಿಸಿದ್ದು, "TCS ನಲ್ಲಿ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ಬಿಸ್ನೆಸ್ ಗ್ರೂಪ್‌ನ ಜಾಗತಿಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಕೃತಿವಾಸನ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಇಒ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ. ಮಾರ್ಚ್ 16, 2023 ರಿಂದ ನಿಯೋಜಿತ ಸಿಇಒ ಆಗಿ ಅಧಿಕಾರ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಗೋಪಿನಾಥನ್ ಅವರು ಕಳೆದ 6 ವರ್ಷದಿಂದ ಕಂಪನಿಗೆ ಬಲವಾದ ನಾಯಕತ್ವ ನೀಡಿದ್ದಾರೆ. ಟಿಸಿಎಸ್‌ಗೆ ರಾಜೇಶ್ ಅವರ ಕೊಡುಗೆ ಅಗಾಧವಾಗಿದೆ. ಚುರುಕುಬುದ್ಧಿ ಹೊಂದಿದ್ದ ರಾಜೇಶ್ ಟಿಸಿಎಸ್ನ ಮುಂದಿನ ಹಂತದ ಬೆಳವಣಿಗೆಗೆ ಅಡಿಪಾಯ ಹಾಕಿದ್ದು, ಅವರ ಭವಿಷ್ಯ ಉತ್ತಮವಾಗಿರಲೆಂದು ಶುಭ ಹಾರೈಸುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳೇ ನಿಮ್ಮ ರೆಸ್ಯೂಮ್ ರೆಡಿ ಮಾಡಿ..! 40 ಸಾವಿರ ಉದ್ಯೋಗಿಗಳ ನೇಮಕಕ್ಕೆ TCS ನಿರ್ಧಾರ
ಇದನ್ನೂ ಓದಿ: ಮೊದಲ ಬಾರಿಗೆ ₹50 ಸಾವಿರ ಕೋಟಿ ತಲುಪಿದ ಟಿಸಿಎಸ್ ಆದಾಯ!
ಇದು ಒಂದು ವಾರದೊಳಗೆ ಭಾರತೀಯ ಐಟಿ ವಲಯದಲ್ಲಿ ನಡೆದ ಎರಡನೇ ಪ್ರಮುಖ ನಾಯಕತ್ವ ಬದಲಾವಣೆಯಾಗಿದೆ. ಕಳೆದ ವಾರ, ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರು ರಾಜೀನಾಮೆ ನೀಡಿದ್ದರು. ಇವರು ಮುಂದಿನ ಡಿಸೆಂಬರ್ 20 ರಿಂದ ಟೆಕ್ ಮಹೀಂದ್ರಾ ಕಂಪನಿಯಲ್ಲಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಲಿದ್ದಾರೆ. ಕಳೆದ 22 ವರ್ಷಗಳಿಂದ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೋಹಿತ್ ಅವರು 2000 ರಲ್ಲಿ ಇನ್ಫೋಸಿಸ್ ಸೇರಿದ್ದರು.