ಮಲಪ್ಪುರಂ (ಕೇರಳ) : ಕೇರಳದ ಮಲಪ್ಪುರಂ ಜಿಲ್ಲೆಯ ತೂವಲ್ತೀರಂ ಬೀಚ್ ಬಳಿ ಭಾನುವಾರ ಹೌಸ್ ಬೋಟ್ ಮುಳುಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿದ್ದಾರೆ. ಇದೀಗ ಬೋಟ್ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಬಳಿಕ ಆತ ತಲೆಮರೆಸಿಕೊಂಡಿದ್ದ. ಶಂಕಿತರ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಬೋಟ್ ಮಾಲೀಕ ನಾಜರ್ ಎಂದು ಗುರುತಿಸಲಾಗಿದ್ದು, ಕೋಝಿಕ್ಕೋಡ್ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ದೋಣಿ ಚಲಾಯಿಸಲು ಪರವಾನಗಿ ಹೊಂದಿರಲಿಲ್ಲ ಎಂಬುದನ್ನು ಅರಿತಿರುವ ತಾನೂರ್ ಪೊಲೀಸರು ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತದ ನಂತರ ಮಾಲೀಕರು ತಲೆಮರೆಸಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ರಾಜ್ಯ ಸರ್ಕಾರದಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಣೆ: ಭಾನುವಾರ ರಾತ್ರಿ 7:30 ರ ಸುಮಾರಿಗೆ ತನೂರ್ ಪ್ರದೇಶದ ತೂವಲ್ತೀರಂ ಬೀಚ್‌ಗೆ ಸಮೀಪವಿರುವ ಅಳಿವೆ ಬಳಿ ದೋಣಿ ಮಗುಚಿ ಬಿದ್ದಿತ್ತು. ದೋಣಿ ಅಪಘಾತದ ನಂತರ ಕೇರಳ ಸರ್ಕಾರವು ಈ ವಿಷಯದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಘೋಷಿಸಿತು. ಈಗಾಗಲೇ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಏತನ್ಮಧ್ಯೆ ಪ್ರವಾಸಿ ದೋಣಿ ದುರಂತದ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗವು ತನ್ನದೇ ಆದ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ ಬೈಜು ನಾಥ್ ಅವರು ಮಲಪ್ಪುರಂ ಜಿಲ್ಲಾಧಿಕಾರಿ ಮತ್ತು ಆಲಪ್ಪುಳದ ಮುಖ್ಯ ಬಂದರು ಸರ್ವೇಯರ್ ಅವರಿಗೆ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಇದನ್ನೂ ಓದಿ: ಊಟಕ್ಕೆ ಸಾಂಬಾರು ಮಾಡಿ, ಅನ್ನಕ್ಕಿಡದ ಪತ್ನಿ.. ಕೋಪದಲ್ಲಿ ಹೆಂಡ್ತಿಯನ್ನ ಕೊಂದೇಬಿಟ್ಟ ಪತಿ!
ಹೆಚ್ಚು ಜನರನ್ನು ಹೊತ್ತೊಯ್ದಿದ್ದರಿಂದ ಅವಘಡ: ತಾನೂರ್ ಮೂಲದ ನಾಸರ್ ಎಂಬುವರ ಒಡೆತನದ ಅಟ್ಲಾಂಟಿಕ್ ಎಂಬ ಬೋಟ್‌ಗೆ ಈ ಅವಘಡ ಸಂಭವಿಸಿದೆ. ಬೋಟ್ ಮಾಲೀಕರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಮೀನುಗಾರಿಕಾ ದೋಣಿಯನ್ನು ಪ್ರವಾಸಿ ಬೋಟ್ ಆಗಿ ಪರಿವರ್ತಿಸಿ ಹೆಚ್ಚು ಜನರನ್ನು ಹೊತ್ತೊಯ್ದಿದ್ದರಿಂದ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ವಿದ್ಯಾರ್ಥಿನಿ ಸಾವು.. ಹುಟ್ಟುಹಬ್ಬದ ಮರುದಿನವೇ ದುರಂತ
ಇದಾದ ನಂತರ ಪೊಲೀಸರು ಬೋಟ್ ಮಾಲೀಕ ನಾಸರ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿ ನಾಸರ್ ತಲೆಮರೆಸಿಕೊಳ್ಳಲು ಸಹಕರಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ರಿಮಾಂಡ್ ಮಾಡಲಾಗಿದೆ. ಅಪಘಾತದ ಕುರಿತು ನ್ಯಾಯಾಂಗ ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಪೊಲೀಸರ ವಿಶೇಷ ತಂಡವೂ ತನಿಖೆ ನಡೆಸುತ್ತಿದೆ.
ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಐದು ಜನರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು