ನಾಮಕ್ಕಲ್ (ತಮಿಳುನಾಡು): ರೆಸ್ಟೋರೆಂಟ್‌ವೊಂದರಲ್ಲಿ ಶೋರ್ಮಾ ತಿಂದು ಬಾಲಕಿ ಸಾವನ್ನಪ್ಪಿರುವ ಘಟನೆ ನಾಮಕ್ಕಲ್ ಜಲ್ಲೆಯಲ್ಲಿ ನಡೆದಿದೆ. ಇಲ್ಲಿನ ಪರಮತಿ ರಸ್ತೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬಾಲಕಿ ಆಹಾರ ಸೇವಿಸಿದ್ದಳು. ಸೆಪ್ಟೆಂಬರ್ 16 ರ ರಾತ್ರಿ ನಾಮಕ್ಕಲ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ರೆಸ್ಟೋರೆಂಟ್‌ಗೆ ಬಂದಿದ್ದರು. ಊಟ ಮಾಡಿ ಶೋರ್ಮಾ ಗ್ರಿಲ್ಡ್ ಚಿಕನ್, ಚಿಕನ್ ರೈಸ್ ಸೇವಿಸಿ ರಾತ್ರಿ ಹಾಸ್ಟೆಲ್‌ಗೆ ಮರಳಿದ್ದರು.
ಆಹಾರ ಸೇವಿಸಿದ 13 ವಿದ್ಯಾರ್ಥಿಗಳಿಗೆ ವಾಂತಿ, ಜ್ವರ, ಮೂರ್ಛೆ ಕಳೆದುಕೊಂಡು ಬಳಲಿದ್ದಾರೆ. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ನಾಮಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ವಿಷಾಹಾರ ಸೇವನೆಯಿಂದ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ರೆಸ್ಟೋರೆಂಟ್‌ಗೆ ಸಂತೈಪೆಟ್ಟೈ ಪುತ್ತೂರಿನ ನಿವಾಸಿಗಳಾದ ಕವಿತಾ, ತಮ್ಮ ಮಗಳು ಕಲೈಯರಸಿ, ಮಗ ಭೂಪತಿ ಮತ್ತು ತಾಯಿ ಸುಜಿತಾ ಅವರೊಂದಿಗೆ ಭೇಟಿ ನೀಡಿ ಶೋರ್ಮಾ ಮತ್ತು ಬಿರಿಯಾನಿ ಸೇವಿಸಿದ್ದಾರೆ. ಮನೆಗೆ ವಾಪಸಾಗುತ್ತಿದ್ದಂತೇ ಇವರಿಗೂ ವಾಂತಿ, ಮೂರ್ಛೆ, ಜ್ವರ ಕಾಣಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಇಲ್ಲದೇ ನರ್ಸ್ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಕವಿತಾ ಮಗಳು ಕಲೈಯರಸಿ ಮತ್ತೆ ವಾಂತಿ ಮಾಡಿ ಮೂರ್ಛೆ ಹೋಗಿ ಕೊನೆಗೆ ಬಾಲಕಿ ಸಾವನ್ನಪ್ಪಿದ್ದಳು. ಉಳಿದವರು ಪ್ರಜ್ಞಾಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಎಚ್ಚೆತ್ತ ನಾಮಕಲ್ ಜಿಲ್ಲಾಧಿಕಾರಿ ಉಮಾ ಆಸ್ಪತ್ರೆಯಲ್ಲಿ ದಾಖಲಾಗಿರುವವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಐವಿನ್ಸ್ ಹೆಸರಿನ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೋರ್ಮಾ ತಯಾರಿಸಲು ಬಳಸುವ ಯಂತ್ರ ಅನೈರ್ಮಲ್ಯದಿಂದ ಕೂಡಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್‌ನಿಂದ ಕೋಳಿ ಮಾಂಸವನ್ನು ಕೂಡ ತಪಾಸಣೆಗೆ ತೆಗೆದುಕೊಂಡಿದ್ದಾರೆ.
ಇದರ ನಂತರ ಐವಿನ್ಸ್ ರೆಸ್ಟೋರೆಂಟ್ ಅನ್ನು ಸದ್ಯ ಸೀಲ್ ಮಾಡಲಾಗಿದೆ. ಜಿಲ್ಲಾಧಿಕಾರಿ ರೆಸ್ಟೋರೆಂಟ್‌ಗೆ ಮಾಂಸ ಸರಬರಾಜು ಮಾಡುವ ಅಂಗಡಿಯನ್ನೂ ಪರಿಶೀಲಿಸಿದರು. ರೆಸ್ಟೋರೆಂಟ್ ಮಾಲೀಕ ನವೀನ್ ಕುಮಾರ್, ನೌಕರರಾದ ಸಂಜಯ್ ಮತ್ತು ಸಮಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ನಾಮಕಲ್ ಜಿಲ್ಲೆಯಾದ್ಯಂತ ಹೋಟೆಲ್ಗಳಲ್ಲಿ ಶೋರ್ಮಾ ಮತ್ತು ಗ್ರಿಲ್ಡ್ ಚಿಕನ್ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಐವಿನ್ಸ್ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ 200 ಜನರ ಪೈಕಿ 43 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಮದುವೆ ಊಟ ಸವಿದು ಹಲವರು ಅಸ್ವಸ್ಥ ಪ್ರಕರಣ; ವ್ಯಕ್ತಿಯಲ್ಲಿ ಕಣ್ಣಿನ ದೋಷ