ಈರೋಡ್ (ತಮಿಳುನಾಡು): ಅಮೆರಿಕದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಜೋ ಬೈಡನ್ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ವಿಶೇಷ ವೈದ್ಯರ ತಂಡವೊಂದನ್ನು ರಚಿಸಿದ್ದು, ಈ ತಂಡದಲ್ಲೀಗ ತಮಿಳುನಾಡು ಮೂಲದ ವೈದ್ಯೆಯೊಬ್ಬರಿಗೆ ಅವಕಾಶ ನೀಡಿದ್ದಾರೆ.
ಯುಸ್ ಅಧ್ಯಕ್ಷೀಯ ಚುನಾವಣೆ ಜಯಿಸಿದ ಬಳಿಕ ತಮ್ಮ ವಿಜಯ ಭಾಷಣದಲ್ಲಿ ಬೈಡನ್ ಕೊರೊನಾ ನಿಯಂತ್ರಣವೇ ನಮ್ಮ ಮೊದಲ ಹೆಜ್ಜೆ ಅದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಇದಾದ ಬಳಿಕ ವೈದ್ಯರ ವಿಶೇಷ ತಂಡ ರಚಿಸಿದ್ದರು. ಈ ತಂಡದಲ್ಲಿ ತಮಿಳುನಾಡು ಮೂಲದ ಸೆಲಿನ್ ಎಂಬ ವೈದ್ಯೆಗೆ ಅವಕಾಶ ನೀಡಿದ್ದಾರೆ.
ಸೆಲಿನ್ ತಂದೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿದ್ದರು. ತಂದೆಯ ದಾರಿಯಲ್ಲಿಯೇ ಸಾಗಿದ ಪುತ್ರಿ ಸೆಲಿನ್ ತಾನೂ ಸಹ ವೈದ್ಯಕೀಯ ಶಿಕ್ಷಣ ಪಡೆದರು. ಇದಕ್ಕೂ ಮೊದಲು ಸೆಲಿನ್ ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಆಗಮಿಸಿ 2 ವರ್ಷಗಳ ಸಂಶೋಧನೆ ಸಹ ನಡೆಸಿದ್ದರು. ಇಲ್ಲಿನ ಬುಡಕಟ್ಟು ಜನಾಂಗವನ್ನು ಹೆಚ್ಚಾಗಿ ಕಾಡುತ್ತಿದ್ದ ಸಾಂಕ್ರಾಮಿಕ ರೋಗಗಳ ಕುರಿತಂತೆ ಸಂಶೋಧನೆ ನಡೆಸಿದ್ದರು. ಈ ಅಧ್ಯಯನ ಪೂರ್ಣಗೊಂಡ ಬಳಿಕ ಅಮೆರಿಕಕ್ಕೆ ತೆರಳಿದ್ದರು.
ಇದಲ್ಲದೇ ಸೆಲಿನ್ ಅಜ್ಜ ಇದೀಗ ಇಂಜಿನಿಯರಿಂಗ್ ವೃತ್ತಿಯಿಂದ ನಿವೃತ್ತಿ ಪಡೆದು ಈರೋಡ್ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಇದೀಗ ಸೆಲಿನ್ ಸಾಧನೆ ಬಗ್ಗೆ ಇಡೀ ಗ್ರಾಮ ಸಂತಸದಿಂದ ಸಂಭ್ರಮಾಚರಣೆ ಮಾಡುತ್ತಿದೆ.