ಚೆನ್ನೈ (ತಮಿಳುನಾಡು): ದೀಪಾವಳಿ ಹಬ್ಬದ ನಿಮಿತ್ತ ತಮಿಳುನಾಡಿನ ಉದ್ಯಮಿ, ಟೀ ಎಸ್ಟೇಟ್ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿಯೇ ಭರ್ಜರಿ ಗಿಫ್ಟ್ ನೀಡಿದ್ದಾರೆ. ದೀಪಾವಳಿ ಬೋನಸ್ ಆಗಿ ತಮ್ಮ 15 ಜನ ನೌಕಕರಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಸೇರಿದಂತೆ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ತಿರುಪುರ ಮೂಲದ ಉದ್ಯಮಿ ಶಿವಕುಮಾರ್ ಎಂಬುವವರೇ ಈ ಬಾರಿ ದೀಪಾವಳಿ ಹಬ್ಬದ ಖುಷಿಗೆ ತಮ್ಮ ಕಾರು ಚಾಲಕನಿಂದ ಹಿಡಿದು ಮ್ಯಾನೇಜರ್ವರೆಗೆ ಯಾರಿಗೂ ತಾರತಮ್ಯ ಮಾಡದೇ ಎಲ್ಲರಿಗೂ ಬೆಲೆ ಬಾಳುವ ಬೈಕ್ಗಳನ್ನು ಬೋನಸ್ ಆಗಿ ಕೊಟ್ಟಿದ್ದಾರೆ. ನೀಲಗಿರಿ ಜಿಲ್ಲೆಯ ಕೋಟಗಿರಿ ಪ್ರದೇಶದಲ್ಲಿ ಎಸ್ಟೇಟ್ ಹೊಂದಿರುವ ಅವರು, ಕೋಟಗಿರಿ ಪ್ರದೇಶದಲ್ಲಿ 20 ವರ್ಷಗಳಿಂದ ನೆಲೆಸಿದ್ದಾರೆ.
ಇಲ್ಲಿಯೇ ಶಿವಕುಮಾರ್ ಎಸ್ಟೇಟ್ ಖರೀದಿಸಿದ್ದಾರೆ. ಹೂಕೋಸು, ಕ್ಯಾರೆಟ್, ಬೀಟ್ರೂಟ್, ಸ್ಟ್ರಾಬೆರಿ ಮುಂತಾದ ತರಕಾರಿಗಳು ಮತ್ತು ಹಣ್ಣುಗಳ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ವಿಶೇಷ ಉಡುಗೊರೆಗಳನ್ನು ನೀಡುತ್ತಾರೆ.
ಇದನ್ನೂ ಓದಿ: ಉದ್ಯೋಗಿಗಳಿಗೆ 'ಮಹೀಂದ್ರಾ ಕಾರು' ಗಿಫ್ಟ್ ನೀಡಿದ ಹಾಲು ಉತ್ಪನ್ನ ತಯಾರಿಸುವ ಕಂಪನಿ ಮಾಲೀಕ!
ಈ ಬಾರಿಯ ದೀಪಾವಳಿ ಬೋನಸ್ ನೀಡಲು ಮಾಲೀಕರು, ತಮ್ಮ ಎಸ್ಟೇಟ್ ಮ್ಯಾನೇಜರ್, ಕಾರು ಚಾಲಕ ಸೇರಿ 15 ಮಂದಿ ಉದ್ಯೋಗಿಗಳನ್ನು ಆಯ್ಕೆ ಮಾಡಿ, ಅವರಿಗೆ ಇಷ್ಟವಾದ ಬೈಕ್ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅದರ ಪ್ರಕಾರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ರೇ ಸ್ಕೂಟರ್‌ನಂತಹ 15 ಬೈಕ್ಗಳನ್ನು ಬುಕ್ ಮಾಡಿ ತರಿಸಿ, ಅವುಗಳ ಕೀಲಿಯನ್ನು ಕೈಗೆ ನೀಡಿದ್ದಾರೆ. ಇದನ್ನು ನಿರೀಕ್ಷಿಸದ ನೌಕರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರನ್ನೂ ಸಂತಸದ ಕಡಲಲ್ಲಿ ಮುಳುಗಿಸಿದೆ.
ಉದ್ಯೋಗಿಗಳು ನೆಮ್ಮದಿಯಿಂದ ಇರಬೇಕು: ''ನಮಗಾಗಿ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳನ್ನು ನೆಮ್ಮದಿಯಿಂದ ಇರಿಸಬೇಕು. ಈ ಕುರಿತು ಯೋಚಿಸಿದಾಗ ಸಂಸ್ಥೆಯ ವತಿಯಿಂದ ಅವರಿಗೆ ವಸತಿ, ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ಇತ್ಯಾದಿ ಸೌಲಭ್ಯ ಕಲ್ಪಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಾಧ್ಯವಾಗುತ್ತದೆ'' ಎಂದು ಉದ್ಯಮಿ ಶಿವಕುಮಾರ್ ಹೇಳುತ್ತಾರೆ.
ಮುಂದುವರೆದು, ''ನಾವು ಉದ್ಯಮಿಗಳಾಗಿ ಇಂದು ಬೆಳೆಯಲು ಪ್ರಮುಖ ಕಾರಣ ನಮ್ಮ ಉದ್ಯೋಗಿಗಳೇ. ಆದ್ದರಿಂದ ನಮ್ಮ ಉದ್ಯೋಗಿಗಳನ್ನು ಸಂತೋಷದಿಂದ ಇಟ್ಟುಕೊಳ್ಳುವುದು. ಮತ್ತು ಅವರ ಅಗತ್ಯಗಳ ಪೂರೈಸುವುದರಿಂದ ನಮ್ಮ ವ್ಯವಹಾರವು ಸುಧಾರಿಸುತ್ತದೆ. ಜೊತೆಗೆ ಉದ್ಯೋಗಿಗಳು ತಮ್ಮ ಜೀವನದಲ್ಲಿ ಸುಧಾರಿಸುತ್ತಾರೆ. ಸಮಾಜ ಕೂಡ ಪ್ರಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ಅಗತ್ಯವಾದ ಸೌಲಭ್ಯಗಳ ಕಲ್ಪಿಸುವುದರ ಜೊತೆಗೆ ನಮ್ಮ ಕಂಪನಿಯ ರೆಸ್ಟೋರೆಂಟ್‌ನಲ್ಲಿ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ'' ಎಂದು ವಿವರಿಸಿದರು.
ಇದನ್ನೂ ಓದಿ: 100 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಚೆನ್ನೈ ಮೂಲದ ಐಟಿ ಕಂಪನಿ