ತಿರುಚ್ಚಿ (ತಮಿಳುನಾಡು): ಅಕ್ರಮ ಸಂಬಂಧದಿಂದ ಜನಿಸಿದ ಶಿಶುವನ್ನು ಮಾರಾಟ ಮಾಡಿದ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಈ ಮಗುವಿನ ಮಾರಾಟ ಪ್ರಕರಣವು ಕರ್ನಾಟಕದ ಬೆಳಗಾವಿ ಮತ್ತು ದೂರದ ರಾಷ್ಟ್ರ ರಾಜಧಾನಿ ದೆಹಲಿವರೆಗೆ ಹಬ್ಬಿರುವುದನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಬೆಳಗಾವಿಯಲ್ಲಿ ಮಗುವನ್ನು ಪತ್ತೆ ಮಾಡಲಾಗಿದ್ದು, ಈ ಮಗು ಮಾರಿದ್ದ ಮಧ್ಯವರ್ತಿಯನ್ನು ದೆಹಲಿಯಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಕಳೆದ ಸೆಪ್ಟೆಂಬರ್ 17ರಂದು ಜಾನಕಿ ಎಂಬ ಮಹಿಳೆ ಹೆರಿಗೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ವೇಳೆ ಹುಟ್ಟುವ ಮಗುವಿಗೆ ತಂದೆಯ ಹೆಸರನ್ನು ಬಹಿರಂಗಪಡಿಸದ ಕಾರಣ ಹೆರಿಗೆಗೆ ಮುನ್ನವೇ ಆಸ್ಪತ್ರೆಯಿಂದ ತೆರಳಿದ್ದರು. ಇದಾದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅಲ್ಲಿ ಕೂಡ ತಂದೆಯ ಹೆಸರು ಹೇಳದೆ ಮಗುವಿನ ಬಗ್ಗೆ ಚೈಲ್ಡ್ ಲೈನ್ಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಜಾನಕಿ ತನ್ನ ಸ್ನೇಹಿತರಾದ ವಕೀಲ ಪ್ರಭು ಮತ್ತು ಪ್ರಭುವಿನ 2ನೇ ಪತ್ನಿಯೊಂದಿಗೆ ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ಇದನ್ನೂ ಓದಿ: ನವಜಾತ ಶಿಶು ಮಾರಾಟಕ್ಕೆ ಯತ್ನಿಸುತ್ತಿದ್ದ ದಂಪತಿ ಸೆರೆ: ಚಾಕೋಲೇಟ್, ಲಾಲಿಪಾಪ್ ಕೋಡ್ ವರ್ಡ್ ಬಳಸಿ ದಂಧೆ
ಈ ಮಗು ಅಕ್ರಮ ಸಂಬಂಧದಿಂದ ಹುಟ್ಟಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಾಕಲು ಇಷ್ಟವಿಲ್ಲದೆ ತಾಯಿ ವಕೀಲ ಪ್ರಭುವಿನ ಮೂಲಕ ಮಗುವನ್ನು ಮಾರಲು ಯತ್ನಿಸುತ್ತಿದ್ದರು. ಅಲ್ಲಿಂದ ವಕೀಲ ಪ್ರಭು ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಜೊತೆ ಮಾತುಕತೆ ನಡೆಸಿ ಮಗುವನ್ನು 3.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಆದರೆ, ಈ ವಕೀಲ ಪ್ರಭು ಮಗುವಿನ ತಾಯಿಗೆ ಕೇವಲ 80 ಸಾವಿರ ರೂಪಾಯಿ ನೀಡಿದ್ದಾನೆ. ಇತ್ತ, ಮಗುವಿನ ತಾಯಿಗೆ ಹಣ ಹಂಚಿಕೆಯಲ್ಲಿ ತಾನು ಮೋಸ ಹೋಗಿರುವುದಾಗಿ ಗೊತ್ತಾಗಿದೆ.
ಠಾಣೆ ನಂತರ ಹೈಕೋರ್ಟ್ ಮೆಟ್ಟಿಲೇರಿದ ತಾಯಿ: ತನ್ನದೇ ಮಗುವಿನ ಮಾರಾಟದಲ್ಲಿ ತಾನೇ ಮೋಸ ಹೋಗಿರುವ ವಿಷಯ ತಿಳಿದ ಈ ಮಹಿಳೆ, ತನ್ನ ಮಗು ಕಾಣೆಯಾಗಿದೆ ಮೊದಲು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮಹಿಳೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಮಗು ಅಪಹರಣವಾಗಿರುವುದನ್ನು ಮನಗಂಡ ನ್ಯಾಯಮೂರ್ತಿಗಳು ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ಮಗುವಿನ ವಿಷಯಕ್ಕಾಗಿ ಜಗಳ ನಡೆದಿರುವುದು ಸಹ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಮಗುವಿನ ಸುಳಿವು: ಮತ್ತೊಂದೆಡೆ ಹೈಕೋರ್ಟ್ ಆದೇಶದ ಪ್ರಕಾರ ಪೊಲೀಸರು ತನಿಖೆ ನಡೆಸಿದಾಗ ಮಗು ಮಾರಾಟ ಮಾಡಿದ್ದು ಬಯಲಿಗೆ ಬಂದಿದೆ. ಅಂತೆಯೇ, ಮಗುವಿನ ತಾಯಿ ಜಾನಕಿ, ವಕೀಲ ಪ್ರಭು, ಈತನ 2ನೇ ಪತ್ನಿ ಷಣ್ಮುಗವಲ್ಲಿ ಹಾಗೂ ಕಾರು ಚಾಲಕ ಆಕಾಶ್ ಹಾಗೂ ಮಗುವನ್ನು ಖರೀದಿಸಿ ಮಾರಾಟ ಮಾಡಿದ್ದ ವ್ರಯ್ಯೂರಿನ ದಲ್ಲಾಳಿ ಕವಿತಾ ಎಂಬುವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ.
ಜೊತೆಗೆ ಮಗುವಿನ ಪತ್ತೆಗಾಗಿ ಪ್ರಕರಣದ ಆಳಕ್ಕೆ ಇಳಿದಾಗ ಮಗು ದೆಹಲಿಯಲ್ಲಿದೆ ಎಂಬುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಇದಾದ ಬಳಿಕ ವಿಶೇಷ ಪಡೆಯ ಪೊಲೀಸರು ದೆಹಲಿಗೆ ತೆರಳಿ ಒಂದು ವಾರ ಕಾಲ ಮೊಕ್ಕಾಂ ಹೂಡಿದ್ದಾರೆ. ಈ ವೇಳೆ ಮಗುವನ್ನು ಖರೀದಿಸಿ ಮಾರಾಟ ಮಾಡಿದ್ದ ದೆಹಲಿಯ ಬ್ರೋಕರ್ ಗೋಪಿನಾಥ್ ಅಲಿಯಾಸ್ ಗೋಪಿಯ ಸುಳಿವು ಸಿಕ್ಕಿದೆ. ಅಂತೆಯೇ, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಮಹಿಳೆಗೆ ಮಗು ಮಾರಾಟ: ಇಷ್ಟೇ ಅಲ್ಲ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದಾಗ ಮಗುವನ್ನು ಕರ್ನಾಟಕದ ಮಹಿಳೆಯೊಬ್ಬರಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತಮಿಳುನಾಡು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಆರೋಪಿ ಗೋಪಿಯನ್ನು ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯದ ಅನುಮತಿಯೊಂದಿಗೆ ಗೋಪಿಯನ್ನು ಕರ್ನಾಟಕಕ್ಕೆ ಕರೆತಂದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಆಗ ಕರ್ನಾಟಕದ ಬೆಳಗಾವಿ ಜಿಲ್ಲೆಯ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ಭಾಗ್ಯಶ್ರೀ ಎಂಬ ಮಹಿಳೆ ಬಳಿ ಮಗುವಿದೆ ಎಂಬುವುದು ತಿಳಿದು ಬಂದಿದೆ. ನಂತರ ಭಾಗ್ಯಶ್ರೀ ಬಗ್ಗೆ ತನಿಖೆ ನಡೆಸಿದಾಗ ಆಕೆಗೆ ಮಕ್ಕಳಿಲ್ಲದಿರುವುದು ಗೊತ್ತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಬ್ರೋಕರ್ ಗೋಪಿ ಆಕೆಯನ್ನು ಸಂಪರ್ಕಿಸಿ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ.
ಮತ್ತೊಂದು ಪ್ರಮುಖ ವಿಷಯ ಎಂದರೆ ಈ ಬ್ರೋಕರ್ ಗೋಪಿ ಮಗುವಿನ ಜನನ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಭಾಗ್ಯಶ್ರೀಗೆ ನೀಡಿದ್ದ. ಇದರಿಂದ ಭಾಗ್ಯಶ್ರೀ ಮಗುವನ್ನು ಕಾನೂನುಬದ್ಧವಾಗಿ ಖರೀದಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಭಾಗ್ಯಶ್ರೀ ಹಾಗೂ ಬ್ರೋಕರ್ ಗೋಪಿ ತಮಿಳುನಾಡಿಗೆ ಕರೆತರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಣದ ನೋಟು ಎಣಿಕೆ ಮಾಡಲಾಗದ ಮದುಮಗ: ಈತನ ಸಹವಾಸವೇ ಸಾಕು, ಈ ಮದುವೆ ಬೇಡವೆಂದ ವಧು!