ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಾವು ನಮ್ಮ ದೇಶವನ್ನು, ಸ್ವಾತಂತ್ರ್ಯವನ್ನು ರಕ್ಷಿಸಬೇಕು, ‘ತಾಲಿಬಾನಿ ಬಿಜೆಪಿ’ ಭಾರತದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ. ಕೇಸರಿ ಪಡೆ ಮಣಿಸಲು ಟಿಎಂಸಿ ಮಾತ್ರ ಸಾಕು ಎಂದು ಕೇಂದ್ರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತ್ತಾದ ಷೇಕ್ಸ್ಪಿಯರ್ ಸರಾನಿ ರೋಡ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸುವುದು ಭವಾನಿಪುರದಿಂದ ಆರಂಭವಾಗಲಿದೆ. ಬಳಿಕ ಇಡೀ ದೇಶವ್ಯಾಪಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಗುಡುಗಿದರು.
ಮುಂದುವರಿದು ಮಾತನಾಡಿದ ಸಿಎಂ ಬ್ಯಾನರ್ಜಿ, ರೋಮ್ನಲ್ಲಿ ನಡೆಯಲಿರುವ ವಿಶ್ವ ಶಾಂತಿ ಸಭೆಯಲ್ಲಿ ಭಾಗವಹಿಸಲು ನನಗೆ ಅವಕಾಶವಿತ್ತು. ಆದರೆ, ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಸಭೆಯಲ್ಲಿ ಜರ್ಮನ್ ಚಾನ್ಸೆಲರ್, ಪೋಪ್ (ಫ್ರಾನ್ಸಿಸ್) ಕೂಡ ಭಾಗವಹಿಸಲಿದ್ದಾರೆ. ಇಟಲಿ ನನಗೆ ಹಾಜರಾಗಲು ವಿಶೇಷ ಅನುಮತಿ ನೀಡಿತ್ತು. ಆದ್ರೆ, ಮೋದಿ ಸರ್ಕಾರ ನನಗೆ ಅನುಮತಿ ನೀಡಿಲ್ಲ. ನಾನು ವಿದೇಶಗಳಿಗೆ ಭೇಟಿ ನೀಡುವುದರಿಂದ ಪ್ರಧಾನಿ ಮೋದಿಗೆ ಅಸೂಯೆ. ಅವರಿಗೆ ನನ್ನ ಏಳಿಗೆ ಸಹಿಸಲು ಆಗುತ್ತಿಲ್ಲ ಎಂದು ಕುಟುಕಿದ್ದಾರೆ.
ಇದನ್ನೂ ಓದಿ: ನಕ್ಸಲ್ ಪೀಡಿತ 10 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಗೃಹ ಸಚಿವ ಅಮಿತ್ ಶಾ ಸಭೆ
ನಾನು ವಿದೇಶಗಳಿಗೆ ಭೇಟಿ ನೀಡಲು ಕಾತುರಳಾಗಿಲ್ಲ. ಆದರೆ, ನಾನು ವಿಶ್ವಶಾಂತಿ ಸಭೆಗಳಲ್ಲಿ ಭಾಗವಹಿಸುವುದು ದೇಶಕ್ಕೆ ಹೆಮ್ಮೆ. ಪ್ರಧಾನಿ ಮೋದಿ ಹಿಂದೂಗಳ ಬಗ್ಗೆ ಮಾತಾಡುತ್ತಾರೆ. ನಾನೂ ಹಿಂದೂ ಮಹಿಳೆಯೇ. ನೀವು ಯಾಕೆ ನನಗೆ ವಿದೇಶಕ್ಕೆ ಹೋಗಲು ಅನುಮತಿ ಕೊಡಲಿಲ್ಲ ಎಂದು ಪ್ರಶ್ನಿಸಿದ್ರು.