ಆಗ್ರಾ (ಉತ್ತರ ಪ್ರದೇಶ): ತಾಜ್ ಮಹಲ್ ಪ್ರವೇಶಕ್ಕೆ ಯುಪಿಐ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ತರುವಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಚಿಂತಿಸುತ್ತಿದ್ದು, ಸ್ಮಾರಕಗಳಲ್ಲಿನ ಟಿಕೆಟಿಂಗ್ ವ್ಯವಸ್ಥೆಯು ಸಂಪೂರ್ಣ ಡಿಜಿಟಲ್ ಆದ ನಂತರದಲ್ಲಿ ಆಫ್‌ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ಗಳನ್ನು ಸಂಪೂರ್ಣವಾಗಿ ಮುಚ್ಚಲು ಯೋಜಿಸುತ್ತಿದೆ.
ಟಿಕೆಟ್ ಕೌಂಟರ್ ಹೊರಗಡೆ ಏರ್ಪಡುವ ದೀರ್ಘ ಸರತಿ ಹಾಗೂ ಅವ್ಯವಸ್ಥೆ ತಡೆಯಲು ಎಎಸ್ಐ ಈ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಇಲಾಖೆ ಶೀಘ್ರದಲ್ಲೇ ವೆಬ್‌ಸೈಟ್‌ನೊಂದಿಗೆ ಅಪ್ಲಿಕೇಶನ್ ಅನ್ನು ಕೂಡ ಪ್ರಾರಂಭಿಸಲು ಚಿಂತಿಸುತ್ತಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ: ಆಗ್ರಾ ವಲಯದ ಸೂಪರಿಂಟೆಂಡೆಂಟ್ ಪುರಾತತ್ವಶಾಸ್ತ್ರಜ್ಞ ಡಾ.ರಾಜ್‌ಕುಮಾರ್ ಪಟೇಲ್ ಮಾತನಾಡಿ, ಜನಸಂದಣಿ ಹೆಚ್ಚುತ್ತಿರುವ ಕಾರಣ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಸರಳೀಕರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ತಾಜ್ ಮಹಲ್ ಟಿಕೆಟ್ ಕೌಂಟರ್ ತೆರೆದಾಗ, ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ ಪ್ರವಾಸಿಗರು ಸಹ ಆಫ್‌ಲೈನ್ ವಿಂಡೋಗಳಿಂದ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.
ಇದರಿಂದಾಗಿ ಟಿಕೆಟ್ ಬ್ಲ್ಯಾಕ್ ಮಾರ್ಕೆಟಿಂಗ್ ಬಗ್ಗೆಯೂ ದೂರುಗಳು ವರದಿಯಾಗಿವೆ. ಆದ್ದರಿಂದ, ಆನ್‌ಲೈನ್ ಟಿಕೆಟಿಂಗ್ ವ್ಯವಸ್ಥೆ ಜಾರಿಯಾದರೆ ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ತಾಂತ್ರಿಕ ತಂಡದೊಂದಿಗೆ ಸಭೆ ನಡೆಸಲಾಗುತ್ತಿದೆ. ವ್ಯವಸ್ಥೆಯನ್ನು ಸರಳಗೊಳಿಸಿದ ನಂತರ ಅದನ್ನು ಜಾರಿಗೆ ತರಲಾಗುವುದು ಎಂದು ಪಟೇಲ್ ಹೇಳಿದರು.
ಎಲ್ಲಿಯೂ ನೆಟ್ ವರ್ಕ್ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ವೈಫೈ ವ್ಯವಸ್ಥೆಯನ್ನೂ ಉತ್ತಮಗೊಳಿಸಲಾಗುವುದು. ಫೋನ್ ಬ್ಯಾಂಕಿಂಗ್ ಬಳಕೆ ತಿಳಿಯದಿರುವ ಅನೇಕ ಪ್ರವಾಸಿಗರಿದ್ದಾರೆ. ಅಂತಹವರು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಮ್ಮ ಎಟಿಎಂ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸುರಕ್ಷಿತವಾಗಿ ಟಿಕೆಟ್ ಕಾಯ್ದಿರಿಸುವಂತಹ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಇದನ್ನೂ ಓದಿ : 2007ರಲ್ಲಿ ತಾಜ್ ಮಹಲ್ ನೋಡಿದ್ದೆ, ಅದು ನಿಜಕ್ಕೂ ವಿಶ್ವದ ಅದ್ಭುತ: ಎಲಾನ್ ಮಸ್ಕ್