ನವದೆಹಲಿ: ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಅರ್ಜಿಗಳು ಮನುಷ್ಯನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದವುಗಳಾದ್ದರಿಂದ ಎಲ್ಲ ಕೋರ್ಟ್ಗಳೂ ತ್ವರಿತವಾಗಿ ವಿಚಾರಣೆ ನಡೆಸಿ, ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಛತ್ತೀಸ್‌ಗಢ ಹೈಕೋರ್ಟ್‌ನ ಆದೇಶದ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸಂಜಯ್ ಕುಮಾರ್ ಅವರಿದ್ದ ಪೀಠವು ಜಾಮೀನು ಅರ್ಜಿ ವಿಚಾರವಾಗಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
ಮೊದಲು ವಿಚಾರಣೆ ನಡೆಸಬೇಕು: ಯಾವುದೇ ಪ್ರಕರಣದಲ್ಲಿ ಆರೋಪಿಯು ಕೋರಿರುವ ನಿರೀಕ್ಷಣಾ ಜಾಮೀನು ಅಥವಾ ನಿಯಮಿತ ಜಾಮೀನನ್ನು ತಕ್ಷಣವೇ ವಿಚಾರಣೆ ನಡೆಸಲು ಕೋರ್ಟ್ಗಳು ಹಿಂಜರಿಯಬಾರದು. ವಿಷಯ ಎಂಥದ್ದೇ ಆಗಿದ್ದರೂ, ಮೊದಲು ವಿಚಾರಣೆಗೆ ಪಡೆದು ನಿರ್ಧರಿಸಬೇಕು. ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಪರಿಗಣಿಸಬೇಕು. ಇಲ್ಲವಾದಲ್ಲಿ ಅಂತಹ ವಿಷಯವು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಹಾನಿಯುಂಟು ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ.
ಜಾಮೀನು ಅರ್ಜಿಯನ್ನು ಇತ್ಯರ್ಥ ಮಾಡುವುದು ಕಾಳಜಿಯ ವಿಷಯ ಎಂದು ಉಲ್ಲೇಖಿಸಿರುವ ಕೋರ್ಟ್, ಮಾನವನ ಸ್ವಾತಂತ್ರ್ಯದ ಕುರಿತಾದ ವಿಚಾರಗಳಲ್ಲಿ ತ್ವರಿತ ನಿರ್ಣಯಗಳನ್ನು ನೀಡಬೇಕು. ಪ್ರಕರಣದ ಸ್ವರೂಪ ಎಂಥದ್ದೇ ಇರಲಿ, ಜಾಮೀನು ಕೋರುವ ವ್ಯಕ್ತಿಗೆ ನ್ಯಾಯ ನೀಡುವುದು ಮೊದಲ ಆದ್ಯತೆಯಾಗಬೇಕು ಎಂದಿದೆ.
ಎಲ್ಲ ಕೋರ್ಟ್ಗಳಿಗೆ ತಾಕೀತು: ಇದರ ಜೊತೆಗೆ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಶೀಘ್ರವಾಗಿ ವಿಚಾರಣಾ ಪೀಠದ ಮುಂದೆ ಪಟ್ಟಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ತನ್ನ ಆದೇಶದ ಪ್ರತಿಯನ್ನು ರಿಜಿಸ್ಟ್ರಾರ್ ಜನರಲ್ ಮತ್ತು ಎಲ್ಲಾ ಹೈಕೋರ್ಟ್‌ಗಳಿಗೆ ಕಳುಹಿಸಬೇಕು ಎಂದು ಆದೇಶಿಸಿದೆ.
ಪ್ರಕರಣದಲ್ಲಿ ತಮ್ಮ ಜಾಮೀನು ಅರ್ಜಿಯನ್ನು ತ್ವರಿತ ವಿಚಾರಣೆಗೆ ಪಡೆಯದ ಕಾರಣ, ಇದರ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು ಪ್ರಕರಣದಲ್ಲಿ ಬಂಧಿಸಬಾರದು ಎಂದು ಸೂಚಿಸಿದೆ. ಛತ್ತೀಸ್‌ಗಢ ಹೈಕೋರ್ಟ್ ಜಾಮೀನು ಅರ್ಜಿಯನ್ನು ಇತ್ಯರ್ಥ ಮಾಡುವವರೆಗೆ ಈತನಿಗೆ ಬಂಧನದಿಂದ ವಿನಾಯಿತಿ ನೀಡಬೇಕು ಎಂದು ತಿಳಿಸಿದೆ.
ಜಾತಿ ವ್ಯವಸ್ಥೆಯ ಬಗ್ಗೆ ಸಿಜೆಐ ಹೇಳಿಕೆ: ದೇಶದಲ್ಲಿನ ಜಾತಿ ವ್ಯವಸ್ಥೆಗೆ ತನ್ನದೇ ಆದ ಇತಿಹಾಸವಿದೆ. ಪ್ರಸ್ತುತದಲ್ಲಿಯೂ ಅದು ಮುಂದುವರೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು. ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತದ ದಿನಗಳಲ್ಲಿಯೂ ಜಾತಿ ವ್ಯವಸ್ಥೆ ಇದೆ. ವಿಭಿನ್ನ ಜಾತಿಯ ಗುಂಪುಗಳಿಗೆ ಆರ್ಥಿಕ ಅವಕಾಶಗಳನ್ನು ವಿಸ್ತರಿಸಲಾಗುತ್ತಿದೆ. ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಲು ದೃಢ ನಿರ್ಧಾರಗಳು ಹಾಗೂ ಮೀಸಲಾತಿ ವ್ಯವಸ್ಥೆ ಭರವಸೆಯ ಬೆಳಕಾಗಿದೆ ಎಂದು ಸಿಜೆಐ ಹೇಳಿದರು.
ಇದನ್ನೂ ಓದಿ: 370ನೇ ವಿಧಿ ರದ್ದು ಪ್ರಕರಣ: ಸುಪ್ರೀಂಕೋರ್ಟ್ ತೀರ್ಪಿಗೆ ನಾಯಕರ ಪ್ರತಿಕ್ರಿಯೆ ಹೀಗಿದೆ