ನವದೆಹಲಿ: ಮುಂದುವರೆದ ಜಾತಿಗಳಲ್ಲಿರುವ ಆರ್ಥಿಕ ದುರ್ಬಲ ವರ್ಗದ (ಇಡಬ್ಲ್ಯುಎಸ್) ಜನರಿಗೆ ಶಾಲಾ ದಾಖಲಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10 ರಷ್ಟು ಮೀಸಲಾತಿ ಒದಗಿಸುವ ಸಂವಿಧಾನದ 103 ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಇಂದು ಮಹತ್ವದ ತೀರ್ಪು ನೀಡಿತು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಮೂವರು ಇಡಬ್ಲ್ಯುಎಸ್ ಕೋಟಾ ಮೀಸಲಾತಿ ಪರವಾಗಿ ತೀರ್ಪು ನೀಡಿದ್ದರಿಂದ, ಬಹುಮತದ ಆಧಾರದಲ್ಲಿ ಸಂವಿಧಾನದ 103 ನೇ ತಿದ್ದುಪಡಿಯನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಂತಾಗಿದೆ.
ಮುಖ್ಯ ನ್ಯಾಯಮೂರ್ತಿ ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸೆಪ್ಟೆಂಬರ್ 27 ರಂದು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಮುಂದುವರೆದ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ನೀಡುವುದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಈ ಮೀಸಲಾತಿ ತಿದ್ದುಪಡಿಯನ್ನು ವಿರೋಧಿಸುತ್ತಿರುವ ಅರ್ಜಿದಾರ, ಶಿಕ್ಷಣ ತಜ್ಞ ಮೋಹನ್ ಗೋಪಾಲ್, ತಿದ್ದುಪಡಿಯು ಮೀಸಲಾತಿಯ ಪರಿಕಲ್ಪನೆಯನ್ನು ನಾಶ ಮಾಡಲು ಮೋಸದ ಮತ್ತು ಹಿಂಬಾಗಿಲಿನ ಪ್ರಯತ್ನವಾಗಿದೆ ಎಂದಿದ್ದರು.
ತಮಿಳುನಾಡು ಸರ್ಕಾರ ಕೂಡ ಇಡಬ್ಲ್ಯೂಎಸ್ ಕೋಟಾ ತಿದ್ದುಪಡಿಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆರ್ಥಿಕ ಮಾನದಂಡಗಳು ಮೀಸಲಾತಿ ವರ್ಗೀಕರಣಕ್ಕೆ ಆಧಾರವಾಗುವುದಿಲ್ಲ ಎಂದು ವಾದಿಸಿದ ತಮಿಳುನಾಡು, ಈ ಮೀಸಲಾತಿಯನ್ನು ಎತ್ತಿಹಿಡಿಯಲು ನಿರ್ಧರಿಸಿದರೆ ಇಂದಿರಾ ಸಾಹ್ನಿ (ಮಂಡಲ) ತೀರ್ಪನ್ನು ಮರುಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
ಇಡಬ್ಲ್ಯೂಎಸ್ ಕೋಟಾ ತಿದ್ದುಪಡಿಯನ್ನು ಕೇಂದ್ರ ಸಮರ್ಥಿಸಿಕೊಂಡಿದೆ. ಈ ಕೋಟಾದಡಿ ಒದಗಿಸಲಾದ ಮೀಸಲಾತಿ ವಿಭಿನ್ನವಾಗಿದೆ ಮತ್ತು ಇದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ ಕೇಂದ್ರ 103 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (SEBC) ಮೀಸಲಾದ ಶೇ 50ರ ಕೋಟಾಕ್ಕೆ ತೊಂದರೆಯಾಗದಂತೆ ಇದನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತನ್ನ ವಾದ ಮುಂದಿಟ್ಟಿತ್ತು.
ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯಮ ಸ್ಥಾಪಿಸಲು ಸಬ್ಸಿಡಿ : ಸಚಿವ ಮುರುಗೇಶ್ ನಿರಾಣಿ