ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪ ಕುರಿತಾಗಿ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಮೊದಲು ಉತ್ತರಾಖಂಡ ಹೈಕೋರ್ಟ್ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠವು ಜಿತೇಂದ್ರ ತ್ಯಾಗಿ ಅವರ ಜಾಮೀನು ಅರ್ಜಿಯ ಬಗ್ಗೆ ಉತ್ತರಾಖಂಡ ರಾಜ್ಯ ಸರ್ಕಾರ ಪ್ರತಿಕ್ರಿಯೆಯನ್ನು ಕೋರಿದ್ದು, ಧರ್ಮ ಸಂಸದ್ನಲ್ಲಿನ ದ್ವೇಷ ಭಾಷಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. 'ಅವರು ಇತರರನ್ನು ಸಂವೇದನಾಶೀಲಗೊಳಿಸುವಂತೆ ಕೇಳುವ ಮೊದಲು, ಅವರೇ ಸಂವೇದನಾಶೀಲರಾಗಬೇಕು. ಆದರೆ ಅವರು ಸಂವೇದನಾಶೀಲರಾಗಿಲ್ಲ. ಧರ್ಮ ಸಂಸದ್ ದ್ವೇಷ ಭಾಷಣಗಳು ಇಡೀ ವಾತಾವರಣವನ್ನು ಹಾಳುಮಾಡುವ ಸಂಗತಿಗಳಾಗಿವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ತ್ಯಾಗಿ ಅವರಿಗೆ ಜಾಮೀನು ನೀಡಲು ಮಾರ್ಚ್ 8ರಂದು ಉತ್ತರಾಖಂಡ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ತ್ಯಾಗಿ ಅವರು ಸುಪ್ರೀಂಕೋರ್ಟ್ನಲ್ಲಿ ಮೇನ್ಮನವಿ ಸಲ್ಲಿಸಿದ್ದರು. ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದಮಂಡನೆ ಮಾಡಿದ್ದರು. ಈ ಸಂದರ್ಭದಲ್ಲಿ ಕೋರ್ಟ್, ಸಿದ್ಧಾರ್ಥ್ ಲೂಥ್ರಾ ಅವರನ್ನು ಧರ್ಮ ಸಂಸದ್ ಎಂದರೇನು? ಎಂದು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೂಥ್ರಾ 'ನಾನು ಆರ್ಯ ಸಮಾಜಕ್ಕೆ ಸೇರಿದ್ದು, ನನಗೆ ಗೊತ್ತಿಲ್ಲ. ಅನೇಕ ವಿಡಿಯೋಗಳನ್ನು ನೋಡಿದ್ದೇನೆ. ಅಲ್ಲಿ ಜನರು ಒಟ್ಟಾಗಿ ಭಾಷಣ ಮಾಡುತ್ತಾರೆ' ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಅಜಯ್ ರಸ್ತೋಗಿ, 'ಧರ್ಮ ಸಂಸದ್ನ ಭಾಷಣಗಳು ವಾತಾವರಣವನ್ನು ಹಾಳು ಮಾಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ತ್ಯಾಗಿ ವಿರುದ್ಧದ ಅಪರಾಧಕ್ಕೆ ಗರಿಷ್ಠ ಶಿಕ್ಷೆ ಮೂರು ವರ್ಷ ಶಿಕ್ಷೆಯಾಗಬಹುದು. ಈಗಾಗಲೇ ಜನವರಿ ತಿಂಗಳಿಂದ ತ್ಯಾಗಿ ಜೈಲಿನಲ್ಲಿದ್ದು, ನಾಲ್ಕು ತಿಂಗಳಿಂದ ಬಂಧನದಲ್ಲಿದ್ದಾರೆ. ತನಿಖೆ ಪೂರ್ಣಗೊಂಡಿದೆ ಎಂದು ಪೀಠ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಮಾತಾನಾಡುವುದು) ಅಡಿಯಲ್ಲಿ ತ್ಯಾಗಿ ಅವರ ವಿರುದ್ಧ ದೂರು ದಾಖಲಾಗಿದ್ದು, ಜನವರಿ 13ರಂದು ಬಂಧಿಸಲಾಗಿತ್ತು.
ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅವರು ದ್ವೇಷಪೂರಿತ ಹೇಳಿಕೆ ನೀಡಿರುವುದನ್ನು ಗಮನಿಸಿದ ಉತ್ತರಾಖಂಡ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಹಿಂದೂ ಧರ್ಮ ಸ್ವೀಕರಿಸುವ ಮೊದಲು ವಾಸೀಂ ರಿಜ್ವಿ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥರಾಗಿದ್ದರು.
ಇದನ್ನೂ ಓದಿ: ತಾಜ್ಮಹಲ್ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಕೋರ್ಟ್