ನವದೆಹಲಿ: ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಮೇಲ್ವಿಚಾರಣೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಯುಪಿ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾ.ಸೂರ್ಯಕಾಂತ್, ನ್ಯಾ.ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ 'ಉತ್ತರಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ತನಿಖೆಯ ಮೇಲುಸ್ತುವಾರಿ ವಹಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಯಾಕೆ ನೇಮಿಸಬಾರದು ಎಂದು ಉತ್ತರಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಾದ ಹರೀಶ್ ಸಾಳ್ವೆ ಮತ್ತು ಗರೀಮಾ ಪ್ರಸಾದ್ ಅವರನ್ನು ಪ್ರಶ್ನಿಸಿದೆ.
ಅಲ್ಲದೇ, ಪ್ರಕರಣದ ಕುರಿತು ಅಂತಿಮ ವರದಿ ಸಲ್ಲಿಸುವವರೆಗೆ ಪಂಜಾಬ್ ಮತ್ತು ಹರಿಯಾಣದ ನ್ಯಾಯಮೂರ್ತಿಗಳಾದ ರಾಕೇಶ್ಕುಮಾರ್ ಜೈನ್ ಮತ್ತು ರಂಜಿತ್ ಸಿಂಗ್ ಅವರನ್ನು ಮೇಲುಸ್ತುವಾರಿಗಳನ್ನಾಗಿ ನೇಮಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಲ್ಲದೇ, ಈ ಬಗ್ಗೆ ಶುಕ್ರವಾರದೊಳಗೆ ವರದಿ ನೀಡಬೇಕು ಎಂದಿದೆ.
ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಸೂಚಿಸಿತ್ತು. ನ್ಯಾಯಾಲಯದ ಮುಂದೆ ಇತರೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬೇಕು ಮತ್ತು ತಜ್ಱರಿಂದ ಡಿಜಿಟಲ್ ಪುರಾವೆಗಳ ಪರಿಶೀಲನೆ ಕಾರ್ಯ ತ್ವರಿತಗೊಳಿಸುವಂತೆ ಆದೇಶಿಸಿದೆ.