ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಕರೆತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ಬಿಡಲಾಗಿದ್ದ ಮೂರು ಚೀತಾಗಳು ಎರಡು ತಿಂಗಳೊಳಗೆ ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿತು. ಇದರ ಜೊತೆಗೆ, ಉಳಿದಿರುವ ಚೀತಾಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿದೆ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂಜಯ್ ಕರೋಲ್ ನೇತೃತ್ವದ ಪೀಠವು, "ಕುನೊ ರಾಷ್ಟ್ರೀಯ ಉದ್ಯಾನವನವು ಇಷ್ಟು ದೊಡ್ಡ ಸಂಖ್ಯೆಯ ಚೀತಾಗಳಿಗೆ ಸಾಕಾಗುವುದಿಲ್ಲ ಎಂದು ತಜ್ಞರ ವರದಿಗಳು ಮತ್ತು ಲೇಖನಗಳು ಹೇಳುತ್ತಿವೆ. ಕೇಂದ್ರ ಸರ್ಕಾರ ಕೂಡಲೇ ಉಳಿದ ಚೀತಾಗಳನ್ನು ಇತರೆ ಅಭಯಾರಣ್ಯಗಳಿಗೆ ಸ್ಥಳಾಂತರಿಸಲು ಮುಂದಾಗಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
"ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಚೀತಾಗಳು ಸಾವನ್ನಪ್ಪಿರುವುದು ಅತ್ಯಂತ ಗಂಭೀರ ವಿಷಯ. ತಜ್ಞರು ನೀಡಿದ ಅಭಿಪ್ರಾಯಗಳ ಪ್ರಕಾರ, ಇಷ್ಟೊಂದು ಚೀತಾಗಳಿಗೆ ಕುನೊ ಸಾಕಾಗುವುದಿಲ್ಲ ಎಂದು ತೋರುತ್ತದೆ. ರಾಜಸ್ಥಾನದಲ್ಲಿ ನೀವು ಏಕೆ ಸೂಕ್ತ ಸ್ಥಳ ಹುಡುಕುತ್ತಿಲ್ಲ" ಎಂದು ನ್ಯಾಯಪೀಠ ಪ್ರಶ್ನಿಸಿತು. ಬಳಿಕ ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, "ಟಾಸ್ಕ್ ಫೋರ್ಸ್ ಮೃತ ಚೀತಾಗಳ ದೇಹವನ್ನು ವಶಪಡಿಸಿಕೊಂಡಿದ್ದು, ಉಳಿದ ಚೀತಾಗಳನ್ನು ಬೇರೆ ಅಭಯಾರಣ್ಯಗಳಿಗೆ ಸ್ಥಳಾಂತರಿಸುವುದೂ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ : ದಕ್ಷಿಣ ಆಫ್ರಿಕಾದಿಂದ ತಂದಿದ್ದ ಚೀತಾಗಳಲ್ಲಿ ಮತ್ತೊಂದು ಸಾವು
ಕಳೆದ ವರ್ಷ ಭಾರತದಲ್ಲಿ ಚೀತಾಗಳ ಮರುಪರಿಚಯ ಪ್ರಾಜೆಕ್ಟ್ ಅಂಗವಾಗಿ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ಕರೆತರಲಾಗಿತ್ತು. ಈ ಪೈಕಿ ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚಿರತೆ (ನಮೀಬಿಯಾದಿಂದ) ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದೆ. ಏಪ್ರಿಲ್ 23 ರಂದು ಉದಯ್ ( ಆಫ್ರಿಕಾ) ಹೃದಯ -ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತು. ಆ ನಂತರ ಮೇ 9 ರಂದು ದಕ್ಷಾ ಎಂಬ ಮತ್ತೊಂದು ದಕ್ಷಿಣ ಆಫ್ರಿಕಾದ ಹೆಣ್ಣು ಚೀತಾ ಅಸುನೀಗಿತ್ತು.
ಇದನ್ನೂ ಓದಿ : ಚಾಮರಾಜನಗರ : ರಸ್ತೆಯ ಮೇಲೆ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಶಂಕೆ
ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ ಚೀತಾವನ್ನು ಭಾರತಕ್ಕೆ ಕರೆತರುವ ಮುನ್ನವೇ ರೋಗದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಮೃತಪಟ್ಟ ಎಲ್ಲ ಚೀತಾಗಳ ಶವ ಪರೀಕ್ಷೆಯನ್ನು ಮಾಡಲಾಗಿದೆ. ಈ ಕುರಿತು ಕಾರ್ಯಪಡೆ ತನಿಖೆ ನಡೆಸುತ್ತಿದೆ ಎಂದು ಭಾಟಿ ಹೇಳಿದರು. ಇದಕ್ಕೆ ಉತ್ತರಿಸಿದ ಪೀಠ, "ನೀವು ವಿದೇಶದಿಂದ ಚೀತಾಗಳನ್ನು ತರುತ್ತಿರುವಿರಿ. ಆದರೆ, ಅವುಗಳನ್ನು ರಕ್ಷಿಸಬೇಕಾಗಿದೆ. ಚೀತಾಗಳಿಗೆ ಸೂಕ್ತವಾದ ಆವಾಸಸ್ಥಾನವನ್ನು ನೀಡಬೇಕು, ಕುನೊಗಿಂತ ಹೆಚ್ಚು ಸೂಕ್ತವಾದ ಆವಾಸಸ್ಥಾನವನ್ನು ಏಕೆ ಅನ್ವೇಷಿಸಬಾರದು?" ಎಂದು ಹೇಳಿತು.
ಇದನ್ನೂ ಓದಿ : ನಮೀಬಿಯಾದಿಂದ ತಂದ ಚಿರತೆ ಸಾವು: ಕಾರ್ಯಪಡೆ ತಜ್ಞರ ಅರ್ಹತೆ, ಅನುಭವದ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್