ನವದೆಹಲಿ : ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಆಹಾರ ಪದಾರ್ಥಗಳಿಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ತಿಳಿಸಿದೆ. ಮೇ 28 ರಂದು ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಸಿಬಿಐಸಿ ಸ್ಪಷ್ಟೀಕರಣ ನೀಡಿದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಆಹಾರವನ್ನು ಪೂರೈಸುತ್ತಿರುವ ವಿಷಯಗಳ ಕುರಿತು ಜಿಎಸ್‌ಟಿ ಅನ್ವಯಿಸುತ್ತದೆಯೇ ಎನ್ನುವ ಬಗ್ಗೆ ಪ್ರತಿನಿಧಿಗಳ ಅಭಿಪ್ರಾಯ ಸ್ವೀಕರಿಸಿದೆ. ಈ ಯೋಜನೆಗೆ ಧನಸಹಾಯ ನೀಡುವ ಸರ್ಕಾರ ಅನುದಾನ ಅಥವಾ ಕಾರ್ಪೊರೇಟ್ ದೇಣಿಗೆದಾರರಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ.
ಇದನ್ನೂ ಓದಿ: ಪಿಎಂಸಿ ಬ್ಯಾಂಕ್ ಸ್ವಾಧೀನಕ್ಕೆ ಆರ್ಬಿಐ ಗ್ರೀನ್ ಸಿಗ್ನಲ್: ‘ಸೆಂಟ್ರಂ’ಗೆ ಕಿರು ಬ್ಯಾಂಕ್ ತೆರೆಯಲು ಅವಕಾಶ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿಯಲ್ಲಿ, ಶಿಕ್ಷಣ ಸಂಸ್ಥೆಗೆ ಒದಗಿಸುವ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವುದೇ ಅಡುಗೆ ಸೇವೆಯನ್ನು ತೆರಿಗೆಯಿಂದ ಮುಕ್ತಗೊಳಿಸಲಾಗುತ್ತದೆ. ಶಾಲಾ ಪೂರ್ವ ಸೇರಿದಂತೆ ಶಾಲೆಗೆ ಯಾವುದೇ ಆಹಾರವನ್ನು ಪೂರೈಸಿದರೂ ವಿನಾಯಿತಿ ಅನ್ವಯಿಸುತ್ತದೆ. ಅಂಗನವಾಡಿಯನ್ನು ಶಿಕ್ಷಣ ಸಂಸ್ಥೆ ಎಂದು (ಪೂರ್ವ ಶಾಲೆಯಾಗಿ) ಪರಿಗಣಿಸಲಾಗಿದೆ.
ಜಿಎಸ್‌ಟಿ ಅಧಿಸೂಚನೆಯಲ್ಲಿ ವ್ಯಾಖ್ಯಾನಿಸಲಾದ ಶಿಕ್ಷಣ ಸಂಸ್ಥೆಗಳು ಅಂಗನವಾಡಿಯನ್ನು ಒಳಗೊಂಡಿವೆ. ಆದ್ದರಿಂದ, ಅಂಗನವಾಡಿಗೆ ಆಹಾರವನ್ನು ನೀಡುವುದರಿಂದ ಸರ್ಕಾರವು ಪ್ರಾಯೋಜಿಸಿದ ಅಥವಾ ಕಾರ್ಪೊರೇಟ್‌ಗಳ ದೇಣಿಗೆಯೂ ವಿನಾಯಿತಿಯಿಂದ ಕೂಡಿದೆ ಎಂದು ಸಿಬಿಐಸಿ ನಿನ್ನೆ ತಿಳಿಸಿದೆ.