ಗುರುದಾಸ್ಪುರ (ಪಂಜಾಬ್): ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಸಂಸದ, ನಟ ಸನ್ನಿ ಡಿಯೋಲ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. 'ಗದರ್ 2' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆದ ನಂತರ ರಾಜಕೀಯ ಬಿಟ್ಟು ಸಿನಿಮಾದಲ್ಲೇ ಮುಂದುವರೆಯಲು ನಟ ಮನಸ್ಸು ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ಘೋಷಿಸಿದ್ದಾರೆ.
ಹಿಂದಿ ಚಿತ್ರರಂಗದ ಖ್ಯಾತ ನಟ ಸನ್ನಿ ಡಿಯೋಲ್ 2019 ರಲ್ಲಿ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿದರು. ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅಲ್ಲಿಂದ ಜನರು ಇವರನ್ನು ಸಿನಿಮಾ ಹೀರೋಗಿಂತ ರಿಯಲ್ ನಾಯಕನಾಗಿ ಕಂಡರು. ವಿನೋದ್ ಖನ್ನಾ ಅವರಂತೆ ಸಮುದಾಯದ ಅಭಿವೃದ್ಧಿಗೆ, ಏಳಿಗೆಗೆ ವಿಭಿನ್ನವಾಗಿ ಏನಾದರೂ ಮಾಡುತ್ತಾರೆ ಎಂದು ಜನರು ನಂಬಿದ್ದರು.
ಅದಕ್ಕೂ ಒಂದು ಕಾರಣವಿತ್ತು. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸನ್ನಿ ಡಿಯೋಲ್ ತಮ್ಮ ಕ್ಷೇತ್ರದ ಜನತೆಗೆ ಬಹುದೊಡ್ಡ ಭರವಸೆಗಳನ್ನು ನೀಡಿದ್ದರು. ಹಾಗಾಗಿಯೇ ಗುರುದಾಸ್ಪುರದ ಮತದಾರರು ಅವರನ್ನು 84 ಸಾವಿರ ಮತಗಳಿಂದ ಭಾರೀ ಮುನ್ನಡೆಯೊಂದಿಗೆ ಗೆಲ್ಲಿಸಿಕೊಟ್ಟಿದ್ದರು. ಆದರೆ ಸನ್ನಿ ಡಿಯೋಲ್ ಚುನಾವಣಾ ಸಮಯಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೇ ಕ್ಷೇತ್ರದಿಂದ ದೂರವೇ ಉಳಿದಿದ್ದರು.
ಸುಮಾರು 4 ವರ್ಷಗಳಿಂದ ಅವರು ಗುರುದಾಸ್ಪುರ ಕ್ಷೇತ್ರಕ್ಕೆ ಬಂದಿರಲಿಲ್ಲ. ಲೋಕಸಭಾ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಅವರು ಅಧಿವೇಶನಕ್ಕೂ ಗೈರು ಹಾಜರಾಗಿ, ಜನರ ನಿರೀಕ್ಷೆಯನ್ನು ಮತ್ತೊಮ್ಮೆ ಹುಸಿ ಮಾಡಿದ್ದರು. ಸನ್ನಿ ಡಿಯೋಲ್ ಅವರ ಇಂತಹ ವರ್ತನೆ ಕ್ಷೇತ್ರದ ಜನರನ್ನು ಕೆರಳಿಸಿದೆ.
ಇದನ್ನೂ ಓದಿ: ಸನ್ನಿ ಡಿಯೋಲ್ ಬಂಗಲೆ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್ ಆಫ್ ಬರೋಡಾ
ಹೀಗಾಗಿ ಗುರುದಾಸ್ಪುರದ ಯುವಕ ಅಮರ್ಜೋತ್ ಸಿಂಗ್ ಮತ್ತು ರೈತ ಮುಖಂಡ ಇಂದರ್ಪಾಲ್ ಸಿಂಗ್ ಬೈನ್ಸ್ ಕೂಡ ಸನ್ನಿ ಡಿಯೋಲ್ ವಿರುದ್ಧ ಹೋರಾಟವನ್ನು ನಡೆಸಿದ್ದರು. ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ಗಳು ಕೂಡ ಹಲವಾರು ಬಾರಿ ನಗರದಲ್ಲಿ ಕಾಣಿಸಿಕೊಂಡಿದ್ದವು.
ಇದೀಗ ಸಂಸದ ಸನ್ನಿ ಡಿಯೋಲ್ ಅವರು ತಮ್ಮ ಅಧಿಕೃತ ನಿವಾಸ ಸೇರಿದಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯಲು ಮತ್ತು ಸಂಬಳ ಹಾಗೂ ಸರ್ಕಾರಿ ಭತ್ಯೆಗಳನ್ನು ನಿಲ್ಲಿಸುವಂತೆ ಕೋರಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಒಬ್ಬ ನಟನಾಗಿ ಮಾತ್ರ ಉಳಿಯಲು ನಿರ್ಧರಿಸಿದ್ದೇನೆ. ಒಬ್ಬ ಮನುಷ್ಯ ಒಂದು ಸಮಯದಲ್ಲಿ ಒಂದು ಕೆಲಸ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲದೇ, "ನನಗೆ ಜನರು ಸಾಕಷ್ಟು ಪ್ರೀತಿಯನ್ನು ಕೊಟ್ಟಿದ್ದಾರೆ. ಕೆಲವೊಂದು ವಿಚಾರಗಳು ಸರಿ ಕಾಣದೇ ಇದ್ದಾಗ ನನಗೆ ಬೇರೆಡೆಗೆ ಹೋಗಬೇಕೆಂದು ಅನಿಸುತ್ತಿದೆ. ಈಗ ನಾನು 2024ರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಟನಾಗಿ ಉಳಿಯಲು ಇಷ್ಟಪಡುತ್ತೇನೆ. ಮುಂದೆಯೂ ಇದೇ ರೀತಿ ಒಬ್ಬ ನಟನಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ. ಆ ಬಗ್ಗೆ ನನಗೆ ಖಾತ್ರಿಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಕೇಳಿದರೆ ನಿರಾಕರಿಸುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Sunny Deol: ಆಸ್ತಿ ಹರಾಜು ನೋಟಿಸ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ನಟ ಸನ್ನಿ ಡಿಯೋಲ್