ನವದೆಹಲಿ: ಇತ್ತೀಚೆಗೆ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಪರವಾಗಿ ದನಿ ಎತ್ತಲು ರಾಷ್ಟ್ರಮಟ್ಟದಲ್ಲಿ ಮಹಿಳಾ ಆಯೋಗ ಇರುವಂತೆ, ಪುರುಷರ ವಿರುದ್ಧ ನಡೆಯುವ ಕೌಟುಂಬಿಕ ದೌರ್ಜನ್ಯದ ದೂರನ್ನು ಕೇಳುವ, ಸಮಸ್ಯೆಗೆ ಸ್ಪಂದಿಸಲು ಸುಪ್ರೀಂ ಮೊರೆ ಹೋಗಲಾಗಿತ್ತು. ಆದರೆ, ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳನ್ನು ಎದುರಿಸಲು ಮಾರ್ಗಸೂಚಿಗಳನ್ನು ರೂಪಿಸಲು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡಲು ಪುರುಷರಿಗಾಗಿ ರಾಷ್ಟ್ರೀಯ ಆಯೋಗ ರಚಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಈ ವಿಷಯವನ್ನು ಪರಿಗಣಿಸಿಲ್ಲ.
"ನೀವು ಕೇವಲ ಏಕಪಕ್ಷೀಯ ಚಿತ್ರವನ್ನು ಬಿಂಬಿಸಲು ಹೊರಟಿದ್ದೀರಿ. ಮದುವೆಯಾದ ಕೆಲವೇ ದಿನಗಳ ಅಂತರದಲ್ಲಿ ಅದೆಷ್ಟೋ ಮಹಿಳೆಯರು ಸಾಯುತ್ತಿದ್ದಾರೆ. ಈ ಯುವತಿಯರ ಡೇಟಾ (ದತ್ತಾಂಶ)ವನ್ನು ನೀವು ನಮಗೆ ನೀಡಬಹುದೇ? ಎಂದು ನ್ಯಾಯಪೀಠ ಕೇಳಿದೆ. ಯಾರಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಇರುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೂ ಬೇಕಿರುವುದಿಲ್ಲ. ಪ್ರತಿ ಪ್ರಕರಣದಲ್ಲೂ ವಾಸ್ತವಾಂಶಗಳು ಬೇರೆಯದ್ದೇ ಇರುತ್ತವೆ. ಅದು ಅವರವರ ವೈಯಕ್ತಿಕ ಪ್ರಕರಣದ ಸತ್ಯಗಳನ್ನು ಅವಲಂಬಿಸಿರುತ್ತದೆ" ಎಂದು ಸಹ ನ್ಯಾಯ ಪೀಠ ಹೇಳಿದೆ.
2021 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಭಾರತದಲ್ಲಿ ಆಕಸ್ಮಿಕ ಸಾವುಗಳ ಕುರಿತು ಪ್ರಕಟಿಸಿದ ಅಂಕಿ-ಅಂಶಗಳನ್ನು ಉಲ್ಲೇಖಿಸಿ ವಕೀಲ ಮಹೇಶ್ ಕುಮಾರ್ ತಿವಾರಿ ಎಂಬುವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಆ ವರ್ಷದಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಅವರಲ್ಲಿ 81,063 ವಿವಾಹಿತ ಪುರುಷರು ಹಾಗೂ 28,680 ವಿವಾಹಿತ ಮಹಿಳೆಯರು ಎಂದು ಮಹೇಶ್ ಕುಮಾರ್ ತಿವಾರಿ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.
"2021 ರಲ್ಲಿ ಸುಮಾರು 33.2 ಪ್ರತಿಶತ ಪುರುಷರು ಕೌಟುಂಬಿಕ ಸಮಸ್ಯೆಗಳಿಂದಾಗಿಯೇ ಅಸುನೀಗಿದರೆ, ಶೇಕಡಾ 4.8 ರಷ್ಟು ವಿವಾಹ ಸಂಬಂಧಿತ ಸಮಸ್ಯೆಗಳಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಈ ವರ್ಷದಲ್ಲಿ ಒಟ್ಟು 1,18,979 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಆತ್ಮಹತ್ಯೆ ಪ್ರಮಾಣ ಶೇಕಡಾ 72ರಷ್ಟಿದ್ದರೆ, ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇಕಡಾ 27ರಷ್ಟಿದೆ" ಎಂದು ಎನ್ಸಿಆರ್ಬಿ ಒದಗಿಸಿದ ಅಂಕಿ-ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆಯ ಸಮಸ್ಯೆ ನಿಭಾಯಿಸಲು ಮತ್ತು ಕೌಟುಂಬಿಕ ದೌರ್ಜನ್ಯದಿಂದ ಬಳಲುತ್ತಿರುವ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್ಹೆಚ್ಆರ್ಸಿ) ನಿರ್ದೇಶನಗಳನ್ನು ಅರ್ಜಿಯಲ್ಲಿ ಕೋರಲಾಗಿತ್ತು.
"ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರ ಅಥವಾ ಕೆಳಗಿನವರ ದೂರನ್ನು ಸ್ವೀಕರಿಸಲು ಪ್ರತಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ/ಠಾಣಾಧಿಕಾರಿಗಳಿಗೆ ಗೃಹ ವ್ಯವಹಾರಗಳ ಸಚಿವಾಲಯದ ಮೂಲಕ ಸರಿಯಾದ ಮಾರ್ಗಸೂಚಿಗಳನ್ನು ನೀಡಲು ಪ್ರತಿವಾದಿ ನಂ.1 (ಭಾರತೀಯ ಒಕ್ಕೂಟ) ಗೆ ನಿರ್ದೇಶನವನ್ನು ನೀಡಿ, ಕೌಟುಂಬಿಕ ಸಮಸ್ಯೆಗಳು ಮತ್ತು ಮದುವೆ ಸಂಬಂಧಿತ ಸಮಸ್ಯೆಗಳಿಂದಾಗಿ ಒತ್ತಡ ಹಾಗೂ ಭಾರತ ಸರ್ಕಾರವು ಸರಿಯಾದ ಶಾಸನವನ್ನು ಜಾರಿಗೊಳಿಸುವವರೆಗೆ ಅದರ ಸರಿಯಾದ ವಿಲೇವಾರಿಗಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅದನ್ನು ಉಲ್ಲೇಖಿಸಿ" ಎಂದು ಪಿಐಎಲ್ ಮೂಲಕ ಮನವಿ ಸಲ್ಲಿಸಲಾಗಿತ್ತು.
"ಕೌಟುಂಬಿಕ ಹಿಂಸಾಚಾರ ಅಥವಾ ಕೌಟುಂಬಿಕ ಸಮಸ್ಯೆಗಳು ಮತ್ತು ವಿವಾಹ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆಯ ವಿಷಯದ ಕುರಿತು ಸಂಶೋಧನೆ ನಡೆಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ/ಶಿಫಾರಸು ನೀಡಿ ಮತ್ತು ರಾಷ್ಟ್ರೀಯ ಪುರುಷರ ಆಯೋಗದಂತಹ ವೇದಿಕೆಯನ್ನು ರೂಪಿಸಲು ಅಗತ್ಯ ವರದಿಗಳನ್ನು ಮಾಡಿ" ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಶರಣಾಗತಿಗೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ