ಉದಯಪುರ (ರಾಜಸ್ಥಾನ್): ಟೈಲರ್ ಕನ್ಹಯ್ಯಾಲಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ರಾಜಕುಮಾರ್ ಶರ್ಮಾ (50) ಅವರಿಗೆ ಯಶಸ್ವಿ ವೈದ್ಯಕೀಯ ಶಸ್ತ್ರ ಚಿಕಿತ್ಸೆ ನೇರವೇರಿಸಲಾಗಿದೆ. ಬ್ರೈನ್ ಹ್ಯಾಮರೇಜ್ಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ರಾಜಕುಮಾರ್ ಅವರನ್ನು ಚಿಕಿತ್ಸೆಗಾಗಿ ಎಂಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೈಪುರ್ನಿಂದ ಉದಯಪುರಕ್ಕೆ ಬಂದ ಪರಿಣಿತ ವೈದ್ಯರ ತಂಡ ಬಹಳ ಕಷ್ಟಪಟ್ಟು ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.
ರಾಜಕುಮಾರ್ ಅವರ ಅನಾರೋಗ್ಯದ ವಿಷಯ ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೈಪುರ ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರ ತಂಡವನ್ನು ಉದಯಪುರಕ್ಕೆ ಕಳುಹಿಸಿದ್ದರು. ಜೈಪುರದಿಂದ ಡಾ. ಮನೀಶ್ ಅಗರ್ವಾಲ್ ಮತ್ತು ರಶೀಮ್ ಕಟಾರಿಯಾ ಉದಯಪುರಕ್ಕೆ ಬಂದಿದ್ದರು.
ವೈದ್ಯರಿಗಾಗಿ ಗ್ರೀನ್ ಕಾರಿಡಾರ್ : ಜೈಪುರದ ಎಸ್ಎಂಎಸ್ ಆಸ್ಪತ್ರೆಯ ವೈದ್ಯರ ವಿಶೇಷ ತಂಡವು ಸಂಜೆ ಸುಮಾರು 4.30ಕ್ಕೆ ಅಲ್ಲಿಂದ ಹೊರಟಿತ್ತು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅವರು ಸಾಗುವ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ಅಂದರೆ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಸುಮಾರು 9.40ಕ್ಕೆ ತಂಡ ಎಂಬಿ ಆಸ್ಪತ್ರೆಗೆ ಬಂದು ತಲುಪಿತ್ತು. ಇವರು ಬರುವಷ್ಟರಲ್ಲಿ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆಯ ಎಲ್ಲ ವ್ಯವಸ್ಥೆ ಮಾಡಿದ್ದರು. ನಂತರ ಬೆಳಗಿನ ಜಾವ 1.15 ರವರೆಗೆ ರಾಜಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಸದ್ಯ ರಾಜ್‌ಕುಮಾರ್ ಶರ್ಮಾ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ವೈದ್ಯರಿಂದ ಪಡೆದ ಮಾಹಿತಿಯ ಪ್ರಕಾರ, ಈ ಶಸ್ತ್ರಚಿಕಿತ್ಸೆಯ ನಂತರದ 48 ಗಂಟೆಗಳು ಬಹಳ ಸೂಕ್ಷ್ಮವಾಗಿವೆ.
ಮೆದುಳಿನ ರಕ್ತಸ್ರಾವ: ರಾಜ್‌ಕುಮಾರ್ ಶರ್ಮಾ ಅವರ ಪತ್ನಿ ಪುಷ್ಪಾ ಶರ್ಮಾ ಮಾತನಾಡಿ, ಶನಿವಾರ ರಾಜ್‌ಕುಮಾರ್ ಶರ್ಮಾ ಅವರು ಮನೆಯಲ್ಲಿ ತಯಾರಾಗುತ್ತಿದ್ದಾಗ ತಲೆಸುತ್ತು ಬಂದು ಬಿದ್ದಿದ್ದಾರೆ. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರಿಂದ ಚಿಕಿತ್ಸೆ ಪಡೆದ ನಂತರ ಅವರಿಗೆ ಮೆದುಳಿನ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಇದಾದ ನಂತರ, ಉದಯಪುರದ ಆಡಳಿತಾಧಿಕಾರಿಗಳಿಂದ ಈ ಸಂಪೂರ್ಣ ವಿಷಯವನ್ನು ಮುಖ್ಯಮಂತ್ರಿಗೆ ತಿಳಿಸಲಾಯಿತು.
ಕನ್ಹಯ್ಯಾ ಲಾಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ರಾಜ್‌ಕುಮಾರ್: ರಾಜ್‌ಕುಮಾರ್ ಅವರು ಕನ್ಹಯ್ಯಾಲಾಲ್ ಸಾಹು ಅವರ ಭೂತ್ ಮಹಲ್ ಬೀದಿಯ ಮಾಲ್ದಾಸ್ ಸ್ಟ್ರೀಟ್‌ನಲ್ಲಿರುವ ಸುಪ್ರೀಂ ಟೈಲರ್ಸ್ ಅಂಗಡಿಯಲ್ಲಿ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕನ್ಹಯ್ಯಾ ಹತ್ಯೆಯಾದಾಗ ರಾಜಕುಮಾರ್ ಮತ್ತು ಈಶ್ವರ್ ಒಟ್ಟಿಗೆ ಇದ್ದರು. ಈ ಘಟನೆಯ ನಂತರ ರಾಜಕುಮಾರ್ ತೀವ್ರ ಆಘಾತಕ್ಕೊಳಗಾಗಿದ್ದರು. ಜೊತೆಗೆ ಹಣಕಾಸಿನ ಅಡಚಣೆಗಳಿಂದ ಅವರು ಹೈರಾಣಾಗಿದ್ದರು. ರಾಜ್‌ಕುಮಾರ್ ಕಳೆದ 3 ತಿಂಗಳಿನಿಂದ ಸಾಕಷ್ಟು ತೊಂದರೆಯಲ್ಲಿದ್ದರು ಎಂದು ಅವರ ಪತ್ನಿ ಪುಷ್ಪಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಹಂತಕರನ್ನು 13 ಕಿ.ಮೀ ದೂರ ಬೆನ್ನಟ್ಟಿ ಹಿಡಿದ ಪೊಲೀಸರು- ವಿಡಿಯೋ ನೋಡಿ