ನವದೆಹಲಿ: ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವರದಿಯೊಂದು ಬಹಿರಂಗವಾಗಿದೆ. ಗಂಗಾ ನದಿಯಲ್ಲಿ ನದಿಯಲ್ಲಿ ಇತ್ತೀಚೆಗೆ ತೇಲಿಬಂದಿದ್ದ ಮೃತದೇಹಗಳನ್ನು ಹೊರತೆಗೆದ ನಂತರ ನದಿಯಲ್ಲಿ ಕೋವಿಡ್ ವೈರಸ್ನ ಯಾವುದೇ ಕುರುಹುಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.
ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ (ಐಐಟಿಆರ್), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಸಹಯೋಗದೊಂದಿಗೆ ಜಲ ಶಕ್ತಿ ಸಚಿವಾಲಯದ ಅಧೀನದಲ್ಲಿರುವ ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಈ ಅಧ್ಯಯನ ನಡೆಸಿದೆ.
ಎರಡು ಹಂತಗಳಲ್ಲಿ ಅಧ್ಯಯನವನ್ನು ನಡೆಸಲಾಗಿದ್ದು, ಕನೌಜ್, ಉನ್ನಾವೊ, ಕಾನ್ಪುರ, ಹಮೀರ್‌ಪುರ, ಅಲಹಾಬಾದ್, ವಾರಣಾಸಿ, ಬಲಿಯಾ, ಬಕ್ಸಾರ್, ಗಾಜಿಪುರ, ಪಾಟ್ನಾಗಳಿಂದ ಮಾದರಿ ಸಂಗ್ರಹಿಸಲಾಗಿದೆ.
ಸಂಗ್ರಹಿಸಿದ ಯಾವುದೇ ಮಾದರಿಗಳಲ್ಲಿ ಸಾರ್ಸ್ ಕೋವಿ-2(SARS-CoV2) ನ ಕುರುಹುಗಳಿಲ್ಲ ಎಂದು ಮೂಲಗಳು ತಿಳಿಸಿವೆ. ವೈರಾಲಾಜಿಕಲ್ ಅಧ್ಯಯನವು ನೀರಿನ ಮಾದರಿಗಳಿಂದ ವೈರಸ್‌ಗಳ ಆರ್‌ಎನ್‌ಎಯನ್ನು ಹೊರತೆಗೆದು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ಬಳಿಕ ಫಲಿತಾಂಶ ಸಿಗುತ್ತದೆ. ನದಿಯ ಜೈವಿಕ ಗುಣಲಕ್ಷಣಗಳನ್ನು ಪರೀಕ್ಷಿಸುವುದೂ ಈ ಅಧ್ಯಯನದಲ್ಲಿ ಸೇರಿದೆ.
ಇದನ್ನೂ ಓದಿ:ದೇಶದಲ್ಲಿ ಮತ್ತೆ ಏರಿದ ಕೊರೊನಾ ಪ್ರಕರಣ: 45,892 ಹೊಸ COVID ಕೇಸ್ ಪತ್ತೆ
ಬಿಹಾರ, ಉತ್ತರಪ್ರದೇಶದ ಬಹುತೇಕ ಭಾಗಗಳ ಜನತೆಯ ಕುಡಿಯುವ ನೀರಿನ ಮೂಲ ಈ ಗಂಗಾ ನದಿ. ಕೋವಿಡ್ನಿಂದ ಮೃತಪಟ್ಟವರನ್ನು ನದಿಗೆ ಎಸೆದಿದ್ದರಿಂದ ನೀರಿನಲ್ಲಿಯೂ ವೈರಸ್ ಸೇರಿರಬಹುದೆಂಬ ಆತಂಕ ನಿರ್ಮಾಣವಾಗಿತ್ತು. ಇದಕ್ಕೀಗ ತೆರೆ ಬಿದ್ದಿದೆ.