ಕತಿಹಾರ್ : ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕತಿಹಾರ್‌ನ ಮಣಿಹರಿ ಬ್ಲಾಕ್‌ನಿಂದ ಗಮನ ಸೆಳೆಯುವ ಸಂಗತಿಯೊಂದು ತಿಳಿದು ಬಂದಿದೆ. ಬಿಹಾರದಲ್ಲಿ ಪ್ರವಾಹದಿಂದಾಗಿ ಜನತೆ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಣಿಹಾರಿಯ ಮರಲ್ಯಾಂಡ್ ಗ್ರಾಮದಲ್ಲಿ ನೆರೆ ಬಂದಿದೆ.
ತರಗತಿ ನಡೆಸಲು ಯಾವುದೇ ಒಣ ಭೂಮಿ ಉಳಿದಿಲ್ಲ. ಈ ಕಾರಣಕ್ಕಾಗಿ ಮೂವರು ಶಿಕ್ಷಕರು ಮಕ್ಕಳಿಗೆ ದೋಣಿಯಲ್ಲಿ ಪಾಠ ಮಾಡುತ್ತಿದ್ದಾರೆ. ಎರಡು ಅಡಿ ನೀರಿನಲ್ಲಿ ದೋಣಿಯೊಳಗೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ.
ಶಿಕ್ಷಣವು ಪ್ರವಾಹದಲ್ಲಿ ತೇಲಿ ಹೋಗಬಾರದೆಂಬ ಉದ್ದೇಶ ಈ ಶಿಕ್ಷಕರದ್ದಾಗಿದೆ. ಕತಿಹಾರ್‌ನ ಮಣಿಹಾರಿ ಪ್ರದೇಶದ ಮರಲ್ಯಾಂಡ್ ಹಳ್ಳಿಯು ಗಂಗಾ ನದಿಯಲ್ಲಿನ ಪ್ರವಾಹದಿಂದಾಗಿ ಮುಳುಗಿ ಹೋಗಿದೆ. ಈ ತಗ್ಗು ಪ್ರದೇಶದಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ಜನರ ಮನೆಗಳಲ್ಲಿ ಈಗಲೂ ಅವರ ಸೊಂಟಕ್ಕಿಂತ ಹೆಚ್ಚು ನೀರು ನಿಂತಿದೆ.
ಇನ್ನು ಶಾಲೆಗಳ ಸ್ಥಿತಿಯಂತೂ ಹೇಳತೀರದ್ದಾಗಿದೆ. ಇದರಿಂದಾಗಿ ಮಕ್ಕಳು ತಿಂಗಳುಗಳ ಕಾಲ ಅಧ್ಯಯನದಿಂದ ವಂಚಿತರಾಗಬಾರದೆಂದು ಶಿಕ್ಷಕರು ಈ ವಿನೂತನ ಪ್ರಯತ್ನ ಮಾಡಿದ್ದಾರೆ. ಶಿಕ್ಷಕರ ಈ ವಿಭಿನ್ನ ಯೋಚನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.