ಪುಣೆ: ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಕೂಡ ನೇಮಕಾತಿ ಇಲ್ಲದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಾನಗರದಲ್ಲಿ ನಡೆದಿದೆ.
ಫರ್ಸುಂಗಿಯ ಗಂಗಾನಗರ ಪ್ರದೇಶದ ನಿವಾಸಿ ಸ್ವಾಪ್ನಿಲ್ ಸುನಿಲ್ ಲೋನಾಕರ್ (24) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ಸುನಿಲ್ ಪೋಷಕರು ಎಂದಿನಂತೆ ಶನಿವಾರ ಸಹ ಕೆಲಸಕ್ಕೆ ಹೋಗಿದ್ದರು. ಸಂಜೆ 4.30 ಕ್ಕೆ ಸಹೋದರಿ ಮನೆಗೆ ಬಂದು ನೋಡಿದಾಗ ಈತ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ... ಕಾರಣ?
ಮೃತ ವಿದ್ಯಾರ್ಥಿ ಡೆತ್‌ನೋಟ್ ಬರೆದಿದ್ದು, ಇದರಲ್ಲಿ ಎಂಪಿಎಸ್ಸಿ ಕುರಿತು ಬೇಸರ ವ್ಯಕ್ತಪಡಿಸಿದ್ದಾನೆ. "ಶಿಕ್ಷಣ ಮುಗಿದಾಗಿನಿಂದ ಎಂಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದೆ. 2019ರ ಪೂರ್ವ ಮತ್ತು ಮುಖ್ಯ ಪರೀಕ್ಷೆಗಳಲ್ಲಿಯೂ ಉತ್ತೀರ್ಣನಾಗಿದ್ದೆ. ಆದರೆ ಒಂದೂವರೆ ವರ್ಷ ಕಳೆದರೂ ಸಹ ಸಂದರ್ಶನ ನಡೆಸಿರಲಿಲ್ಲ. ಮತ್ತು 2020ರಲ್ಲಿ ಎಂಪಿಎಸ್ಸಿ ಪೂರ್ವ ಪರೀಕ್ಷೆಯಲ್ಲಿ ಸಹ ಉತ್ತೀರ್ಣನಾಗಿದ್ದೆ. ಮಾನಸಿಕ ಒತ್ತಡ ಮತ್ತು ಕುಟುಂಬದ ಸಮಸ್ಯೆಯಿಂದಾಗಿ ಉದ್ಯೋಗ ಸಿಕ್ಕಿಲ್ಲ" ಎಂದು ತಿಳಿಸಿದ್ದಾನೆ.