ನವದೆಹಲಿ: ತವಾಂಗ್‌ನಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ಸೇನೆಗಳ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದು, ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸುತ್ತಿಲ್ಲ ಎಂದು ಬುಧವಾರ ವಾಗ್ದಾಳಿ ನಡೆಸಿದರು.
ಬುಧವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಭಾರತದ ಗಡಿಯೊಳಗೆ ಚೀನಾ ಅತಿಕ್ರಮಣ ಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಹಠಮಾರಿಯಾಗಿದೆ ಮತ್ತು ಅದರ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಸಾರ್ವಜನಿಕರಿಗೆ ಮತ್ತು ಸದನಕ್ಕೆ ನೈಜ ಪರಿಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಚೀನಾದ ಅತಿಕ್ರಮಣ ಯತ್ನದ ಬಗ್ಗೆ ಸರ್ಕಾರ ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಏತನ್ಮಧ್ಯೆ, ತವಾಂಗ್‌ನಲ್ಲಿ ಭಾರತ-ಚೀನಾ ಭರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ನಮ್ಮ ಸೇನಾ ಪಡೆಗಳು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ ಮತ್ತು ಸಮಗ್ರತೆಯ ಉಲ್ಲಂಘನೆಯ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ರಕ್ಷಣಾ ಸಚಿವರ ಹೇಳಿಕೆಗಳ ಹೊರತಾಗಿಯೂ ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್ ಮತ್ತು ಮನೀಶ್ ತಿವಾರಿ ಲೋಕಸಭೆಯಲ್ಲಿ ಚೀನಾದೊಂದಿಗಿನ ಗಡಿ ಪರಿಸ್ಥಿತಿ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದರು.
ಇದನ್ನೂ ಓದಿ: ತವಾಂಗ್‌ನಲ್ಲಿ ಭಾರತೀಯ ಸೇನೆಯ ತೋರಿದ ಧೈರ್ಯ, ಶೌರ್ಯವನ್ನು ಎಷ್ಟು ಪ್ರಶಂಸಿದರೂ ಕಡಿಮೆ; ರಾಜನಾಥ್ ಸಿಂಗ್