ಮುಂಬೈ: ಲಾಕ್‌ಡೌನ್ ಹೊರತಾಗಿಯೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಈ ಮೊದಲೇ ವಿಧಿಸಿದ್ದ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ತುರ್ತು ಕಾಯ್ದೆ ಅಡಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.
ನಿರ್ಬಂಧಗಳ ವೇಳೆ ಏನು ತೆರೆದಿರುತ್ತದೆ..?
ಜನರು ಕಾರಣವಿಲ್ಲದೇ ಸುತ್ತಾಡುವುದನ್ನು ತಡೆಯಲು ಕೇವಲ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಸಮಯಾವಕಾಶ ನೀಡಲಾಗಿದೆ. ಆಹಾರ ಮಳಿಗೆಗಳು ಮೊದಲು ರಾತ್ರಿ 8 ಗಂಟೆಯವರೆಗೆ ತೆರೆಯಲು ಅವಕಾಶವಿದ್ದು, ಈಗ ಕೇವಲ 4 ಗಂಟೆಗಳ ಅವಕಾಶ ನೀಡಲಾಗಿದೆ. ಬೆಳಗ್ಗೆ 7ರಿಂದ 8 ರವರೆಗೆ ಹೋಮ್ ಡಿಲಿವರಿಗೆ ಅವಕಾಶವಿದೆ.
ಯಾವ ಯಾವ ಸೌಲಭ್ಯಗಳು ಇರುವುದಿಲ್ಲ..?
ಎಲ್ಲಾ ಸಲೂನ್ ಮತ್ತು ಬ್ಯೂಟಿ ಪಾರ್ಲರ್‌ಗಳು, ಶಾಲೆಗಳು, ಕಾಲೇಜುಗಳು, ಸಿನೆಮಾ ಹಾಲ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುವುದು. ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾಂಗಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ
ಯಾವುದೇ ಧಾರ್ಮಿಕ ಕೂಟಗಳಿಗೆ ಅವಕಾಶವಿಲ್ಲ, ಪೂಜಾ ಸ್ಥಳಗಳು ಮುಚ್ಚಿಲ್ಲ. ಕೇವಲ 25 ಜನರಿಗೆ ಮದುವೆಗಳಿಗೆ ಹಾಜರಾಗಲು ಅವಕಾಶವಿದೆ. ಕೇವಲ 20 ಜನರಿಗೆ ಮಾತ್ರ ಅಂತ್ಯಕ್ರಿಯೆಯ ಭಾಗವಾಗಲು ಅವಕಾಶವಿರುತ್ತದೆ. ಎಲ್ಲಾ ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ. ಖಾಸಗಿ ಬಸ್ಸುಗಳಲ್ಲಿ ಶೇಕಡಾ 50ರಷ್ಟು ಆಸನಗಳ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಗೆ ಅವಕಾಶವಿದೆ.