ಮುಂಬೈ(ಮಹಾರಾಷ್ಟ್ರ): ನಿಮಗೆ ಅಧಿಕಾರ ಬೇಕಾದರೆ ನನ್ನನ್ನು ಜೈಲಿಗೆ ಹಾಕಿ. ಆದರೆ, ನನ್ನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಅಧಿಕಾರಕ್ಕೆ ಬರುವುದಕ್ಕಾಗಿ ಈ ರೀತಿಯ ಕೆಟ್ಟ ಕೆಲಸ ಮಾಡಬೇಡಿ. ನಿಮ್ಮ ಕುಟುಂಬಕ್ಕೆ ನಾವು ಎಂದಿಗೂ ತೊಂದರೆ ನೀಡಿಲ್ಲ ಎಂದರು.
ಜಾರಿ ನಿರ್ದೇಶನಾಲಯ(ಇಡಿ) 2017ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಉದ್ಧವ್ ಠಾಕ್ರೆ ಸೋದರ ಮಾವ ಶ್ರೀಧರ್ ಪಾಟಂಕರ್ ಅವರ 6.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ಅವರು ಮಾತನಾಡಿದ್ದಾರೆ. ನಮ್ಮ ವಿರುದ್ಧ ಹೋರಾಡಲು ಬಯಸಿದರೆ, ನೇರವಾಗಿ ಹೋರಾಟ ಮಾಡಿ. ನಮ್ಮ ಕುಟುಂಬಗಳನ್ನು ಗುರಿಯಾಗಿಸಿಕೊಂಡು ನಿಮ್ಮ ಏಜೆನ್ಸಿಗಳ ಮೂಲಕ ನಮ್ಮ ಮೇಲೆ ದಾಳಿ ನಡೆಸಬೇಡಿ. ನಮ್ಮನ್ನು ಜೈಲಿನಲ್ಲಿ ಹಾಕಿ ನೀವೂ ಅಧಿಕಾರಕ್ಕೆ ಬರುತ್ತೀರಿ ಎಂದಾದರೆ ನನ್ನನ್ನು ಜೈಲಿಗೆ ಹಾಕಿ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಉದ್ಧವ್ ಠಾಕ್ರೆ ಬಾವನಿಗೆ ಸೇರಿದ 11 ಫ್ಲಾಟ್ಗಳಿಗೆ ಬೀಗ ಜಡಿದ ಇಡಿ
ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬದ ಸಂಬಂಧಿಕರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದ್ದು, ಠಾಕ್ರೆ ಅವರ ಪತ್ನಿ ರಶ್ಮಿ ಸಹೋದರನಿಗೆ ಸೇರಿದ 11 ಫ್ಲಾಟ್ಗಳಿಗೆ ಬೀಗ ಹಾಕಿದೆ. ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಮೌನ ಮುರಿದು ಮಾತನಾಡಿದ್ದಾರೆ. ಬಿಜೆಪಿ ನೇತೃತ್ವದ ಮೋದಿ ಸರ್ಕಾರಕ್ಕೆ ತಾಕತ್ತಿದ್ದರೆ ಭೂಗತ ಪಾತಕಿ ಇಬ್ರಾಹಿಂ ದಾವೂದ್ನನ್ನ ಕೊಲ್ಲಲಿ ಎಂದು ಸವಾಲು ಹಾಕಿರುವ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖಂಡ ನವಾಬ್ ಮಲಿಗೆ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಇದ್ದಿದ್ದರೆ ಕೇಂದ್ರ ಸಂಸ್ಥೆಗಳು ಏನು ಮಾಡುತ್ತಿದ್ದವು? ಎಂದು ಪ್ರಶ್ನೆ ಮಾಡಿದ್ದಾರೆ.