ವಿಶಾಖಪಟ್ಟಣಂ(ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಬುಧವಾರ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ವಂದೇ ಭಾರತ್ ರೈಲಿಗೆ ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಬೇಕಾಗಿತ್ತು. ಇಷ್ಟರಲ್ಲೇ ಈ ದುರ್ಘಟನೆ ನಡೆದಿದೆ.
ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ಗಾಜಿನ ಫಲಕ ಜಖಂಗೊಂಡಿದೆ. ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಕಲ್ಲು ತೂರಾಟ ನಡೆದ ಒಂದು ವಾರದ ನಂತರ ಈ ಘಟನೆ ಸಂಭವಿಸಿದೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಅನೂಪ್ ಕುಮಾರ್ ಸೇತುಪತಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ವಂದೇ ಭಾರತ್ ರೈಲು ನಿರ್ವಹಣೆ ಮತ್ತು ಪ್ರಾಯೋಗಿಕ ಚಾಲನೆಗಾಗಿ ವಿಶಾಖಪಟ್ಟಣಂ ತಲುಪಿದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅದರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ವಿವಾಹಿತೆಯನ್ನು ಕಿಡ್ನ್ಯಾಪ್ ಮಾಡಿ ರೇಪ್; ಚಂದ್ರಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ
ವಿಶಾಖಪಟ್ಟಣಂ ನಿಲ್ದಾಣದಿಂದ ನಿರ್ವಹಣೆಗಾಗಿ ಕೋಚ್ ಕೇರ್ ಸೆಂಟರ್ಗೆ ತೆರಳುತ್ತಿದ್ದಾಗ ರೈಲು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಘಟನೆಯ ದೃಶ್ಯಾವಳಿಗಳ ಬಗ್ಗೆ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಆರೋಪಿಗಳಿಗಾಗಿ ರೈಲ್ವೆ ರಕ್ಷಣಾ ಪಡೆ ಆರ್‌ಪಿಎಫ್ ಹುಡುಕಾಟ ನಡೆಸುತ್ತಿದೆ ಎಂದು ಅನೂಪ್ ಕುಮಾರ್ ಹೇಳಿದ್ದಾರೆ.
’’ಇದು ಅತ್ಯಂತ ದುರದೃಷ್ಟಕರ ಘಟನೆ. ಕಂಚರಪಾಲೆಂ ಬಳಿ ಅಪರಿಚಿತರು ಬೋಗಿಗೆ ಕಲ್ಲು ತೂರಾಟ ನಡೆಸಿದ್ದರಿಂದ ಹೊಚ್ಚ ಹೊಸ ವಂದೇ ಭಾರತ್ ರೈಲಿನ ಕೋಚ್‌ನ ಗಾಜು ಒಡೆದಿದೆ. ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಆರ್‌ಪಿಎಫ್ ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಒಮ್ಮೆ ಅವರು ಸಿಕ್ಕಿಬಿದ್ದರೆ ಶಿಕ್ಷೆ ನೀಡುತ್ತಾರೆ. ಸಾರ್ವಜನಿಕ ಆಸ್ತಿ ಆಗಿರುವ ರೈಲಿನ ಮೇಲೆ ಇಂತಹ ಕೃತ್ಯಗಳನ್ನು ಎಸಗಬಾರದು, ಕಿಟಕಿಯ ಗಾಜಿನ ಬೆಲೆ ಸುಮಾರು ಒಂದು ಲಕ್ಷ ಎಂದು ಅಂದಾಜಿಸಲಾಗಿದೆ" ಎಂದು DRM ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲೂ ನಡೆದಿತ್ತು ಕಲ್ಲು ತೂರಾಟ: ವಿಶಾಖಪಟ್ಟಣದಲ್ಲಿ ನಡೆದ ಈ ಘಟನೆಗೂ ಮುನ್ನ ಜನವರಿ 2 ರಂದು, ಮಾಲ್ಡಾ ಬಳಿ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಾಗುತ್ತಿದ್ದ ವಂದೇ ಭಾರತ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ಪರಿಣಾಮ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿಟಕಿ ಗಾಜುಗಳು ಒಡೆದಿದ್ದವು. ಡಾರ್ಜಿಲಿಂಗ್‌ನ ಫನ್ಸಿಡೆವಾ ಪ್ರದೇಶದ ಬಳಿ ಈ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದರು ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ಇದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ನಮ್ಮ ರಾಜ್ಯದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ:ಜ.19 ರಂದು ತೆಲಂಗಾಣಕ್ಕೆ ಪ್ರಧಾನಿ ಮೋದಿ ಆಗಮನ: ಹಲವು ಯೋಜನೆಗಳಿಗೆ ಚಾಲನೆ