ಮಲಪ್ಪುರಂ (ಕೇರಳ): ದೇಶದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ಘಟನೆಗಳು ನಿರಂತರವಾಗಿ ಸಾಗಿವೆ. 7 ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಕೇರಳ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದಿದ್ದಾರೆ. ಇದರಿಂದ ಕಿಟಕಿಯ ಗಾಜುಗಳು ಜಖಂಗೊಂಡಿವೆ. ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಸಂಜೆ 5 ಗಂಟೆಗೆ ಉತ್ತರ ಕೇರಳ ಜಿಲ್ಲೆಯ ತಿರುನಾವಯ ಮತ್ತು ತಿರೂರ್ ನಡುವೆ ಹಾದು ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದಾಗ ದಾಳಿ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದುಷ್ಕರ್ಮಿಗಳ ಕಲ್ಲೇಟಿಗೆ ಕಿಟಕಿಯ ಗಾಜುಗಳು ಬಿರುಕುಬಿಟ್ಟಿವೆ. ಪೊಲೀಸರಿಗೆ ದೂರು ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏಪ್ರಿಲ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದ್ದರು. ಇದು ರಾಜ್ಯದ ಮೊದಲ ರೈಲಾಗಿದ್ದು, ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ. ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಸುತ್ತದೆ. ಮೊದಲ ಹಂತದ ಅಡಿಯಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಸಂಪೂರ್ಣ ಹಳಿಯನ್ನು ಗಂಟೆಗೆ 110 ಕಿ.ಮೀ ವೇಗಕ್ಕೆ ಪರಿವರ್ತಿಸಲು 381 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
ರೈಲಿಗೆ ಕಲ್ಲೇಟಿನ ಘಟನೆಗಳು: ದೇಶದ ವಿವಿಧ ರಾಜ್ಯಗಳಲ್ಲಿ ಆರಂಭಿಸಲಾದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ದಾಳಿ ಮುಂದುವರಿದಿದೆ. ಪಶ್ಚಿಮ ಬಂಗಾಳದ ಆರಂಭವಾದ ನಾಲ್ಕು ದಿನಗಳ ಬಳಿಕ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ ಘಟನೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಲಾಗಿತ್ತು. ಈ ರೈಲಿನ ಮೇಲೆ ಎರಡು ಬಾರಿ ಕಲ್ಲಿನಿಂದ ದಾಳಿ ಮಾಡಲಾಗಿದೆ.
ಹೌರಾದಿಂದ ನ್ಯೂ ಜಲಫೈಗುರಿಗೆ ಸಂಪರ್ಕ ನೀಡುವ ರೈಲು ಕಥಿಯಾ ವಿಭಾಗದ ಸಾಮ್ಸಿ ಕುಮಾರ್‌ಗಂಜ್ ಬಳಿ ತೆರಳುತ್ತಿದ್ದಾಗ ಅನಾಮಿಕರು ಕಲ್ಲು ತೂರಿದ್ದರು. ಇದರಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿದ್ದವು. ಕಿಟಿಕಿಯ ಗಾಜು ಒಡೆದು ಹೋಗಿತ್ತು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲಿಗೆ ಹಲವು ವಿಘ್ನ: ವಂದೇ ಭಾರತ್ ರೈಲುಗಳಿಗೆ ಹಲವು ವಿಘ್ನ ಕಾಡುತ್ತಿವೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸುತ್ತಿದ್ದಾಗ ಜಾನುವಾರುಗಳಿಗೆ ಡಿಕ್ಕಿ ಹೊಡೆದಿತ್ತು. ಮುಂಬೈನ ಸೆಂಟ್ರಲ್ ವ್ಯಾಪ್ತಿಯ ಅತುಲ್ ಸ್ಟೇಶನ್ ಬಳಿ ತೆರಳುತ್ತಿದ್ದ ವೇಳೆ ಜಾನುವಾರುಗಳಿಗೆ ಗುದ್ದಿತ್ತು.
ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಗುಜರಾತ್‌ನಲ್ಲಿ ನಡೆದಿತ್ತು. ಗಾಂಧಿ ನಗರದ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದಾಗ ಹಳಿ ದಾಟುವಾಗ ರೈಲಿಗೆ ಸಿಲುಕಿ ಅಸುನೀಗಿದ್ದರು. ಇದಕ್ಕೂ ಮೊದಲು ಇದೇ ರೈಲಿಗೆ ಜಾನುವಾರುಗಳು ಸಿಲುಕಿ ಮೃತಪಟ್ಟ ಘಟನೆಗಳು ನಡೆದಿದ್ದವು.
ಇದನ್ನೂ ಓದಿ: ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್ ಕೊಹ್ಲಿ- ಗಂಭೀರ್: ನೋವಿನಲ್ಲೂ ಬ್ಯಾಟ್ ಮಾಡಿದ ರಾಹುಲ್