ನವದೆಹಲಿ: ಅಮೆರಿಕ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಭಾವನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಮುಂದುವರೆದಿದೆ. ಶುಕ್ರವಾರ ಮುಕ್ತಾಯವಾಗಿದ್ದ ವ್ಯವಹಾರಕ್ಕೆ ಹೋಲಿಸಿದರೆ ಇಂದು (ಸೋಮವಾರ) ಬೆಳಗ್ಗೆ 9.42 ರಲ್ಲಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ 0.4 ರಿಂದ 0.5 ರಷ್ಟು ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಅಮೆರಿಕದ ಕೇಂದ್ರ ಬ್ಯಾಂಕ್ ಇನ್ನಷ್ಟು ಬಡ್ಡಿದರ ಏರಿಸುವ ನಿರೀಕ್ಷೆಯಿಂದ ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯು ಶುಕ್ರವಾರ 2023ರ ಅತಿದೊಡ್ಡ ಸಾಪ್ತಾಹಿಕ ಇಳಿಕೆ ದಾಖಲಿಸಿತ್ತು.
ಭಾರತೀಯ ಷೇರು ಮಾರುಕಟ್ಟೆಯ ಬಗ್ಗೆ ವಿದೇಶಿ ಹೂಡಿಕೆದಾರರ ನಕಾರಾತ್ಮಕ ಮನಸ್ಥಿತಿ ಮುಂದುವರೆದಿದ್ದು, ಈ ತಿಂಗಳು ಅವರು ಭಾರತದ ಷೇರು ಮಾರುಕಟ್ಟೆಯಿಂದ 2,313 ಕೋಟಿ ರೂಪಾಯಿ ಹಿಂಪಡೆದಿದ್ದಾರೆ. ಆದಾಗ್ಯೂ ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಮಾರಾಟದ ವೇಗ ಕಡಿಮೆಯಾಗಿದೆ. ಜನವರಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ 28,852 ಕೋಟಿ ರೂಪಾಯಿ ಹಿಂಪಡೆದಿದ್ದರು. ಮಾರುಕಟ್ಟೆಯಲ್ಲಿ ಈಗಲೂ ಏರಿಳಿತಗಳು ಮುಂದುವರೆಯಲಿದ್ದು, ಷೇರು ವಹಿವಾಟುದಾರರು ಬೆಲೆ ಏರಿದ ಕೂಡಲೇ ಮಾರಾಟ ಮಾಡುವ ನಿಯಮ ಅಳವಡಿಸಿಕೊಳ್ಳಬೇಕು ಎಂದು ಚಾಯ್ಸ್ ಬ್ರೋಕಿಂಗ್ ಕಂಪನಿಯಲ್ಲಿ ಇಕ್ವಿಟಿ ರಿಸರ್ಚ್ ಅನಲಿಸ್ಟ್ ಆಗಿರುವ ಓಂ ಮೆಹ್ರಾ ಹೇಳಿದ್ದಾರೆ.
ಮತ್ತೆ ಬಡ್ಡಿದರ ಏರಿಕೆ ಸುಳಿವು..: ಅಮೆರಿಕದ ಇತ್ತೀಚಿನ ಹಣಕಾಸು ನೀತಿ ಸಭೆಯಲ್ಲಿ ಭಾಗವಹಿಸಿದ್ದವರು, ಫೆಡರಲ್ ಫಂಡ್‌ಗಳ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಗೆ ಹೆಚ್ಚಿಸಲು ಒಲವು ತೋರಿದ್ದಾರೆ. ಬಡ್ಡಿ ದರ ಹೆಚ್ಚಳವು ತ್ವರಿತವಾಗಿ ಬೆಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಅಮೆರಿಕದಲ್ಲಿನ ಗ್ರಾಹಕ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 6.5 ರಷ್ಟಿದ್ದುದು ಜನವರಿಯಲ್ಲಿ ಶೇ 6.4 ಕ್ಕೆ ಇಳಿದಿದೆ. ಆದರೆ ಇದು ಶೇ 2 ರ ಗುರಿಗಿಂತ ಬಹಳ ಮೇಲಿದೆ.
ಬಡ್ಡಿದರಗಳನ್ನು ಹೆಚ್ಚಿಸುವುದು ವಿತ್ತೀಯ ನೀತಿಯ ಸಾಧನವಾಗಿದ್ದು, ಅದು ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಹಣದುಬ್ಬರ ದರವನ್ನು ಕಡಿಮೆ ಮಾಡುತ್ತದೆ. ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ವಿಶ್ಲೇಷಕ ವಿಕೆ ವಿಜಯಕುಮಾರ್ ಮಾತನಾಡಿ, ಭಾರತೀಯ ಆರ್ಥಿಕತೆ ಪ್ರಬಲವಾಗಿದೆ ಮತ್ತು ಹೂಡಿಕೆದಾರರು ಮಾರುಕಟ್ಟೆಯ ಕುಸಿತವನ್ನು ಬಳಸಿಕೊಂಡು ಬ್ಯಾಂಕಿಂಗ್, ಬಂಡವಾಳ ಸರಕುಗಳು, ಐಟಿ, ಸಿಮೆಂಟ್ ಮತ್ತು ವಲಯಗಳಾದ್ಯಂತ ಉತ್ತಮ ಗುಣಮಟ್ಟದ ಷೇರುಗಳನ್ನು ಸಂಗ್ರಹಿಸಬಹುದು ಎಂದರು.
ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 366 ಅಂಕ ಇಳಿಕೆಯಾಗಿ 59,097 ಹಾಗೂ ನಿಫ್ಟಿ ಫಿಫ್ಟಿ 133 ಅಂಕ ಇಳಿಕೆಯಾಗಿ 17,331 ರಲ್ಲಿ ವಹಿವಾಟು ನಡೆಸಿದ್ದವು.
ರೂಪಾಯಿ ದರ ಅಲ್ಪ ಕುಸಿತ: ಫೆಡರಲ್ ರಿಸರ್ವ್ ಬಡ್ಡಿ ದರ ಹೆಚ್ಚಳದ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಕುಸಿಯಿತು. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಂಭವನೀಯ ಮಧ್ಯಸ್ಥಿಕೆಯ ನಿರೀಕ್ಷೆಯು ಕರೆನ್ಸಿಯು ಪ್ರಮುಖ ಮಟ್ಟದಲ್ಲಿ ಉಳಿಯಲು ಸಹಾಯ ಮಾಡಿತು. ಹಿಂದಿನ ವಹಿವಾಟಿನಲ್ಲಿ ಇದ್ದ 82.75 ಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯವು ಸೋಮವಾರ ಬೆಳಗ್ಗೆ 10:54 ರ ಸುಮಾರಿಗೆ ಪ್ರತಿ US ಡಾಲರ್‌ಗೆ 82.9225 ಆಗಿತ್ತು. ರೂಪಾಯಿ ಮೌಲ್ಯ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೂಲಕ ಡಾಲರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ವಹಿವಾಟುದಾರರು ಹೇಳಿದ್ದಾರೆ.
ಇದನ್ನೂ ಓದಿ: 3 ತಿಂಗಳಲ್ಲಿ ನಿಮ್ಮ ಹಣ 4 ಪಟ್ಟು ಹೆಚ್ಚಾಗುತ್ತೆ ಎಂದು ಚೀನೀಯರಿಂದ ದೋಖಾ: 3 ಭಾರತೀಯರು ಅರೆಸ್ಟ್