ತಿರುವನಂತಪುರಂ: ಯಾವುದೇ ವಾಹನಗಳಿಗೆ ವಿಮೆ ಇಲ್ಲದಿದ್ದಲ್ಲಿ ರಸ್ತೆ ಸಂಚಾರ ಪೊಲೀಸರು ದಂಡ ಹಾಕುತ್ತಾರೆ. ವಿಮೆ ಇಲ್ಲದೇ, ಯಾವುದೇ ವಾಹನಗಳು ರಸ್ತೆಗೆ ಇಳಿಯಬಾರದು. ಅದರಲ್ಲೂ ಅಪಘಾತ ಉಂಟಾದಾಗ ಪರಿಹಾರ ಸಿಗುವುದು ಕೂಡ ಇದರಿಂದ ತಪ್ಪುತ್ತದೆ. ಇಷ್ಟೆಲ್ಲ ಗೊತ್ತಿದ್ದರೂ, ಕೇರಳದಲ್ಲಿನ ಕೆಲ ಸರ್ಕಾರಿ ಬಸ್ಗಳಿಗೇ ವಿಮೆ ಇಲ್ಲವಾಗಿದೆ. ಇದು ಈಟಿವಿ ಭಾರತ್ ನಡೆಸಿದ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ.
ಹೌದು, ರಾಜಧಾನಿ ತಿರುವನಂತಪುರಂನ ಹಲವು ಮಾರ್ಗಗಳಲ್ಲಿ ಸಂಚರಿಸುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವಿಮೆ ಇಲ್ಲ. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಈ ನಿಯಮ ಅನುಸರಿಸುತ್ತಿದೆಯೇ ಎಂದು ETV ಭಾರತ್ ತನಿಖೆ ನಡೆಸಿತ್ತು. ಇದರಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವಿಮೆ ಮಾಡಿಸಲಾಗಿದೆಯೇ ಎಂದು ಪರಿಶೀಲಿಸಲಾಗಿದೆ. ಸಿಕ್ಕ ಮಾಹಿತಿ ಪ್ರಕಾರ, ಸರ್ಕಾರಿ ಸಂಸ್ಥೆ ಎಂಬ ಹೆಸರು ಬಳಸಿಕೊಂಡು ಕೆಎಸ್‌ಆರ್‌ಟಿಸಿಯು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದೆ. ಎಲ್ಲ ಸಿಟಿ ಬಸ್‌ಗಳ ವಿಮೆ 2020ರ ಕೊನೆ ಅಥವಾ 2021 ರ ಆರಂಭದಲ್ಲಿ ಮುಕ್ತಾಯಗೊಂಡಿದೆ. ಆದರೆ, ಅದನ್ನು ಮತ್ತೆ ನವೀಕರಣ ಮಾಡಲಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಪ್ರವಾಸಿ ತಾಣಗಳ ಬಸ್ಗೂ ಇಲ್ಲ ವಿಮೆ: ಸಿಟಿ ಬಸ್‌ಗಳಲ್ಲದೇ, ರಾಜಧಾನಿಯಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ತೆರಳುವ ಬಸ್ಗಳಿಗೂ ವಿಮೆ ಇಲ್ಲವಾಗಿದೆ. ವಿದೇಶಿಗರು ಸೇರಿದಂತೆ ಸ್ಥಳೀಯ ಪ್ರವಾಸಿಗರನ್ನು ಕರೆದೊಯ್ಯುವ ಕೆಎಸ್‌ಆರ್‌ಟಿಸಿ ಬಸ್‌ಗಳು ವಿಮೆ ಖಾತರಿ ಮಾಡಿಕೊಂಡಿಲ್ಲ. ಸಿಟಿ ಬಸ್‌ಗಳಲ್ಲದೇ ಪ್ರಮುಖ ಪ್ರವಾಸಿ ಕೇಂದ್ರಗಳ ಅನೇಕ ಬಸ್‌ಗಳು ವಿಮಾ ರಕ್ಷಣೆಯಿಲ್ಲದೇ ಕಾರ್ಯನಿರ್ವಹಿಸುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅಲಂಕರಿಸಿದೆ. ಆದರೆ, ಆರ್ಟಿಸಿ ಅಧಿಕಾರಿಗಳು ಅವಧಿ ಮೀರಿದ ವಿಮೆ ನವೀಕರಿಸುವುದನ್ನು ನಿರ್ಲಕ್ಷಿಸಿದ್ದಾರೆ. ರಾಜ್ಯದಲ್ಲಿ ಸೀಟ್ ಬೆಲ್ಟ್ ಕಡ್ಡಾಯ, ಎಐ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ರಸ್ತೆ ಸಂಚಾರದ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಿದೆ. ಆದರೆ, ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ವಾಹನಗಳು ಮಾತ್ರ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಜನರನ್ನು ಹೊತ್ತು ಸಾಗುತ್ತಿವೆ.
ಅಪಘಾತವಾದಲ್ಲಿ ವಿಮೆ ಕತೆಯೇನು?: ಸರ್ಕಾರಿ ಬಸ್‌ಗಳಿಗೆ ಅಚಾನಕ್ಕಾಗಿ ಅಪಘಾತ ಉಂಟಾದಲ್ಲಿ ಪ್ರಯಾಣಿಕರಿಗೆ ಸಿಗಬೇಕಾದ ಪರಿಹಾರ ಮೊತ್ತವನ್ನು ಸರ್ಕಾರ ಹೇಗೆ ಭರಿಸುತ್ತದೆ. ಬಸ್ಗೆ ವಿಮೆ ಇಲ್ಲವಾದಲ್ಲಿ ಪರಿಹಾರ ಸಿಗುತ್ತದೆಯಾ ಎಂಬುದು ಪ್ರಶ್ನೆಯಾಗಿದೆ.
ಇದನ್ನೂ ಓದಿ: ನರ್ಮದಾ ನದಿಯಲ್ಲಿ ಮುಳುಗಿ ಮೂವರು ಮೃತ.. ಒಬ್ಬ ಬಚಾವ್