ಲಖನೌ (ಉತ್ತರ ಪ್ರದೇಶ): ಪಬ್ಜಿ ಗೇಮ್ನಲ್ಲಿ ಪರಿಚಯವಾದ ಗೆಳೆಯನಿಗೋಸ್ಕರ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಪ್ರಕರಣದಲ್ಲಿ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಓರ್ವ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್‌ಎಸ್‌ಬಿ ಆದೇಶದಲ್ಲಿ ತಿಳಿಸಿದೆ.
ಪಾಕಿಸ್ತಾನದಿಂದ ನೇಪಾಳ ಗಡಿ ದಾಟಿ ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಮೇ 13ರಂದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಅಂದು ಭಾರತ-ನೇಪಾಳ ಗಡಿ ಮೂಲಕ ಬಸ್‌ನಲ್ಲಿ ಈ ಮಹಿಳೆ ಬಂದಿದ್ದಾರೆ. 1,751 ಕಿಮೀ ಉದ್ದದ ಗಡಿಯ ಕಾವಲು ಕಾಯುವ ಹೊಣೆಯನ್ನು ಎಸ್‌ಎಸ್‌ಬಿ ಹೊತ್ತಿದೆ. ಹೀಗಾಗಿ ಸೀಮಾ ಮತ್ತು ಆಕೆಯ ನಾಲ್ವರು ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ ಅನ್ನು ಎಸ್ಎಸ್ಬಿಯ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ತಪಾಸಣೆ ನಡೆಸಿದ್ದರು. ಆದರೂ, ಸೀಮಾ ಅವರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.
ಇದನ್ನೂ ಓದಿ: ಪಾಕ್ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ..
43ನೇ ಬೆಟಾಲಿಯನ್ ಇನ್ಸ್‌ಪೆಕ್ಟರ್ ಸುಜಿತ್ ಕುಮಾರ್ ವರ್ಮಾ ಮತ್ತು ಹೆಡ್ ಕಾನ್‌ಸ್ಟೇಬಲ್ ಚಂದ್ರ ಕಮಲ್ ಕಲಿತಾ ಅಮಾನತಾದ ಎಸ್‌ಎಸ್‌ಬಿ ಸಿಬ್ಬಂದಿ. ಇವರು ಮೇ 13ರಂದು ಸೀಮಾ ಮತ್ತು ಆಕೆಯ ನಾಲ್ಕು ಮಕ್ಕಳು ಖುನ್ವಾ ಗಡಿಯ ಮೂಲಕ ದೇಶಕ್ಕೆ ಪ್ರವೇಶಿಸಿದಾಗ ವಾಹನಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದರು. ಆಗ ಕರ್ತವ್ಯದಲ್ಲಿದ್ದ ಈ ಇಬ್ಬರಿಗೆ ಸೀಮಾ ಬಳಿ ವೀಸಾ ಇಲ್ಲದಿದ್ದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಬಿ ಹೇಳಿದೆ.
ಸೀಮಾ ಹೈದರ್ ಯಾರು? ಹಿನ್ನೆಲೆ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೀಮಾ ವಿವಾಹಿತ ಮಹಿಳೆಯಾಗಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. ಆಕೆಯ ಪತಿ ಉದ್ಯೋಗಕ್ಕಾಗಿ ಸೌದಿಯಲ್ಲಿ ನೆಲೆಸಿದ್ದಾರೆ. ಇದರ ನಡುವೆ ಆನ್ಲೈನ್ ಗೇಮ್ಗಳನ್ನು ಆಡುತ್ತಿದ್ದ ಸೀಮಾಗೆ 2019ರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದ ನಿವಾಸಿಯಾದ ಸಚಿನ್ ಮೀನಾ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಂದ ಇಬ್ಬರು ನಡುವೆ ಸಲುಗೆ ಬೆಳೆದು ಒಮ್ಮೆ ನೇಪಾಳದಲ್ಲಿ ಭೇಟಿಯಾಗಿ ಒಟ್ಟಿಗೆ ವಾಸಿಸಲು ಇಚ್ಛಿಸಿದ್ದರು. ಅಂತೆಯೇ, ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ದುಬೈ ಮೂಲಕ ನೇಪಾಳಕ್ಕೆ ತಲುಪಿದ್ದರು. ನಂತರ ನೇಪಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಬಂದಿದ್ದರು.
ಪ್ರಕರಣ ಬೆಳಕಿಗೆ ಬಂದ ನಂತರ ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಸೀಮಾ ಅವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಅವರನ್ನೂ ಬಂಧಿಸಲಾಗಿತ್ತು. ಜುಲೈ 7ರಂದು ಇಬ್ಬರಿಗೂ ಜಾಮೀನು ಮಂಜೂರಾಗಿದ್ದು, ಅಂದಿನಿಂದ ಸೀಮಾ ತನ್ನ ಮಕ್ಕಳೊಂದಿಗೆ ರಬೂಪುರದಲ್ಲಿರುವ ಸಚಿನ್ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಸಿನಿಮಾ ಚಾನ್ಸ್.. ಬಾಲಿವುಡ್ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?