ನವದೆಹಲಿ: ದೆಹಲಿ ಸರ್ಕಾರಕ್ಕೆ ಲಸಿಕೆಗಳನ್ನು ಪೂರೈಸಲು ಸ್ಪುಟ್ನಿಕ್ ವಿ ತಯಾರಕರು ಒಪ್ಪಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಮಾಹಿತಿ ನೀಡಿದ್ದಾರೆ.
ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ತಯಾರಕರು ದೆಹಲಿಗೆ ಪೂರೈಸಲು ಒಪ್ಪಿದ್ದಾರೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ "ಅವರೊಂದಿಗೆ (ಸ್ಪುಟ್ನಿಕ್ ವಿ ತಯಾರಕರು) ಮಾತುಕತೆ ನಡೆಯುತ್ತಿದೆ. ಅವರು ನಮ್ಮ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆದರೆ, ನಮಗೆ ಯಾವ ಪ್ರಮಾಣದ ಲಸಿಕೆಗಳನ್ನು ನೀಡುತ್ತಾರೆ ಎಂಬ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮೊಡೆರ್ನಾ ಮತ್ತು ಫೈಜರ್ ತಯಾರಿಸಿದ ಲಸಿಕೆಗಳು ಮಕ್ಕಳಿಗೆ ಸೂಕ್ತವಾಗಿವೆ ಮತ್ತು ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಇವುಗಳನ್ನು ಖರೀದಿಸಬೇಕು ಎಂದು ಅವರು ಹೇಳಿದರು.
ಲಾಕ್‌ಡೌನ್ ವಿಸ್ತರಣೆ ಕುರಿತು ಮಾಧ್ಯಮಗಳಿಗೆ ಕೇಜ್ರಿವಾಲ್ ಪ್ರತಿಕ್ರಿಯಿಸಿ, "ನಾವು ಶಾಶ್ವತವಾಗಿ ಲಾಕ್‌ಡೌನ್ ಅನ್ನು ವಿಸ್ತರಿಸಲು ಸಾಧ್ಯವಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಕ್ರಮೇಣ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗುವುದು ಎಂದು ಹೇಳಿದರು.
ಕಪ್ಪು ಶಿಲೀಂಧ್ರ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, "ನಗರದಲ್ಲಿ ಸುಮಾರು 620 ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳಿವೆ. ಈ ಸೋಂಕಿತರಿಗೆ ಚಿಕಿತ್ಸೆ ನೀಡಲು ನಮಗೆ 3,500 ಚುಚ್ಚುಮದ್ದು ಬೇಕು ಆದರೆ ನಮಗೆ ಪ್ರತಿದಿನ 400 ಚುಚ್ಚುಮದ್ದು ಅಷ್ಟೇ ಲಭ್ಯವಿದೆ ಎಂದು ಹೇಳಿದ್ರು.