ನವದೆಹಲಿ: ರಾಷ್ಟ್ರ ರಾಜಧಾನಿಯ ಜನಪಥ್ ನಗರದಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಜೀಪ್ವೊಂದು ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಜೀಪಿನ ಚಕ್ರದಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಇಲ್ಲಿನ ಕರೋಲ್ ಬಾಗ್ ನಿವಾಸಿ ಅರುಣ್ ಎಂದು ಗುರುತಿಸಲಾಗಿದ್ದು, ಎನ್ಆರ್ಐವೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಬುಧುವಾರ ಬೆಳಗ್ಗೆ 8 ಗಂಟೆಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಯಾರೋ ಪಿಸಿಆರ್ ಕರೆ ಮಾಡಿ ಜನಪಥ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರು. ಕೂಡಲೇ ಘಟನಾಸ್ಥಳಕ್ಕೆ ತೆರಳಿದ ಪೊಲೀಸರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರ್ಧಾರಿಯನ್ನು (39) ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಿರ್ಧಾರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಓದಿ: ಮಹಾರಾಷ್ಟ್ರದಲ್ಲಿ ದಾಖಲೆ ಬಿಸಿಲಿನ ಬೇಗೆ.. ಕರ್ನಾಟಕ ಸೇರಿ ಎಲ್ಲೆಲ್ಲಿ ತಾಪಮಾನ ಹೆಚ್ಚಿದೆ ?
ಅಪಘಾತದ ಸಿಸಿಟಿವಿ ದೃಶ್ಯಗಳಲ್ಲಿ, ಕೆಂಪು ಬಣ್ಣದ ಜೀಪ್ವೊಂದು ಅತಿ ವೇಗದಲ್ಲಿ ಚಲಿಸುತ್ತಿತ್ತು. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಬಳಿಕ ಆರೋಪಿ ಪರಾರಿಯಾಗಿದ್ದನು. ಈ ಘಟನೆಯಲ್ಲಿ ಸೈಕಲ್ ಸಹ ಪುಡಿ-ಪುಡಿ ಯಾಗಿದೆ.
ಇನ್ನು ಪೊಲೀಸರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.