ನವದೆಹಲಿ: ಬಿಎಂಡಬ್ಲ್ಯೂ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಪೋರ್ಟ್ಸ್ ಸೈಕಲ್‌ನಲ್ಲಿ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣದ ಗುರುಗ್ರಾಮ್ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಗುರುಗ್ರಾಮ್ ನಿವಾಸಿ ಶುಭೇಂದು ಚಟರ್ಜಿ ಎಂದು ಗುರುತಿಸಲಾಗಿದೆ.
ಇಲ್ಲಿನ ಮಹಿಪಾಲ್‌ಪುರ ಮೇಲ್ಸೇತುವೆ ಬಳಿ ಶುಭೇಂದು ಚಟರ್ಜಿ ತಮ್ಮ ಸ್ಪೋರ್ಟ್ಸ್ ಸೈಕಲ್‌ನಲ್ಲಿ ಹೋಗಿದ್ದರು. ಈ ವೇಳೆ ಹಿಂದಿನಿಂದ ಬಿಎಂಡಬ್ಲ್ಯೂ ಕಾರು ವೇಗವಾಗಿ ಬಂದು ಗುದ್ದಿದೆ. ಇದರಿಂದ ಚಟರ್ಜಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅಷ್ಟರಲ್ಲದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ವಸಂತ್ ಕುಂಜ್ ಉತ್ತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಕಾರಿನ ಒಂದು ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ಚಾಲಕನನ್ನು ಬಂಧಿಸಿ, ಬಿಎಂಡಬ್ಲ್ಯೂ ಕಾರನ್ನು ವಶಪಡಿಸಿಕೊಂಡಿದ್ದೇವೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿ ನೀಡಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಅಪಘಾತ.. ಮೂವರ ಸ್ಥಿತಿ ಗಂಭೀರ