ಪೂರ್ನಿಯಾ (ಬಿಹಾರ್): ಪೂರ್ನಿಯಾ ಜಿಲ್ಲೆಯ ಎಸ್ಪಿ ದಯಾಶಂಕರ್ ಎಂಬುವರಿಗೆ ಸೇರಿದ ಹಲವಾರು ಸ್ಥಳಗಳ ಮೇಲೆ ವಿಶೇಷ ಜಾಗೃತ ದಳ (ಸ್ಪೆಷಲ್ ವಿಜಿಲೆನ್ಸ್ ಯುನಿಟ್) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐಪಿಎಸ್ ದಯಾ ಶಂಕರ್ ಅವರಿಗೆ ಸೇರಿದ ಸ್ಥಳಗಳಲ್ಲಿ ಸುಮಾರು 72 ಲಕ್ಷ ನಗದು ಪತ್ತೆಯಾಗಿದೆ. ಪತ್ತೆಯಾದ ಹಣವನ್ನು ಎಣಿಸಲು ಅಧಿಕಾರಿಗಳು ನೋಟು ಎಣಿಕೆ ಮತ್ತು ಚಿನ್ನ ಬೆಳ್ಳಿ ತೂಕದ ಯಂತ್ರಗಳನ್ನು ತರಿಸಿಕೊಂಡಿದ್ದಾರೆ.
ಪೂರ್ನಿಯಾ ಎಸ್ಪಿ ದಯಾಶಂಕರ್ ಅವರಿಗೆ ಸೇರಿದ ಹಲವಾರು ಸ್ಥಳಗಳ ಮೇಲೆ ಮಂಗಳವಾರ ಬೆಳಗ್ಗೆಯಿಂದ ವಿಶೇಷ ಜಾಗೃತ ದಳದ ದಾಳಿ ನಡೆಯುತ್ತಿದೆ. ಪೂರ್ನಿಯಾ ಎಸ್ಪಿ ದಯಾಶಂಕರ್ ನಿವಾಸ, ಸದರ್ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ನಿವಾಸ ಮತ್ತು ಪೊಲೀಸ್ ಲೈನ್‌ನ ಕೆಲ ಸ್ಥಳಗಳಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.
ಆದಾಯಕ್ಕಿಂತ ಹೆಚ್ಚು ಹಣ ಸಂಪಾದನೆ ಪ್ರಕರಣ: 2016ರಲ್ಲಿ ಹಲವು ರೀತಿಯಲ್ಲಿ ಈತ ಆದಾಯಕ್ಕಿಂತ ಹೆಚ್ಚು ಹಣ ಗಳಿಸಿದ ಆರೋಪ ಕೇಳಿಬಂದಿದ್ದವು. ನಂತರ ಶೇ 65ರಷ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿದ ಆರೋಪ ಕೇಳಿಬಂದಿತ್ತು. ಇದಾದ ನಂತರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣ ದಾಖಲಾಗಿತ್ತು ಎಂದು ವಿಶೇಷ ನಿಗಾ ವಿಭಾಗದ ಎಡಿಜಿ ನಯ್ಯರ್ ಹಸನೈನ್ ಖಾನ್ ತಿಳಿಸಿದ್ದಾರೆ.
7 ಕಡೆ ದಾಳಿ: ಎಡಿಜಿ ಪ್ರಕಾರ, ಪೊಲೀಸ್ ವರಿಷ್ಠಾಧಿಕಾರಿ ದಯಾಶಂಕರ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ನಂತರ ಇಂದು ದಾಳಿ ನಡೆಸಲಾಗುತ್ತಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಪಾಟ್ನಾ, ಪೂರ್ನಿಯಾ ಸೇರಿದಂತೆ 7 ಕಡೆ ದಾಳಿ ನಡೆಯುತ್ತಿದೆ.
ಇದನ್ನು ಓದಿ:ತಾಯಿಯಿಲ್ಲದ 10 ತಿಂಗಳ ಮಗು ತಂದೆಗೆ ಹಸ್ತಾಂತರಿಸಲು ಹೈಕೋರ್ಟ್ ನಕಾರ.. ಏನಿದು ಪ್ರಕರಣ?