ಉಜ್ಜಯಿನಿ(ಮಧ್ಯಪ್ರದೇಶ) : ಮಾಘ ಮಾಸ ಕೃಷ್ಣಪಕ್ಷದ ಚತುರ್ದಶಿ ತಿಥಿಯನ್ನು ಮಹಾಶಿವರಾತ್ರಿ ಎಂದು ಕರೆಯುತ್ತೇವೆ. ಶಿವರಾತ್ರಿಯಂದು ರಾತ್ರಿಯೆಲ್ಲಾ ಪರಮೇಶ್ವರನನ್ನು ಪೂಜಿಸುತ್ತಾ, ಸ್ಮರಿಸುತ್ತಾ ಆರಾಧನೆ ಮಾಡಲಾಗುತ್ತದೆ. ನಾಡಿನಾದ್ಯಂತ ಮಹಾ ಶಿವರಾತ್ರಿಗಾಗಿ ಎಲ್ಲ ದೇಗುಲಗಳಲ್ಲಿ ಸಕಲ ಸಿದ್ಧತೆಗೆಳು ನಡೆದಿದ್ದು, ಇಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಗಳಲ್ಲಿಯೇ ಶಿವಲಿಂಗವನ್ನಿಟ್ಟು ಅದಕ್ಕೆ ಅಭಿಷೇಕ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಧ್ಯಪ್ರದೇಶದಾದ್ಯಂತ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಉಜ್ಜಯಿನಿಯಲ್ಲಿಯೂ ವಿಶೇಷ ಆಚರಣೆಗಳು ಜರುಗುತ್ತಿವೆ.
ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ : ಮಹಾಶಿವರಾತ್ರಿ ಹಿನ್ನೆಲೆ ಉಜ್ಜಯಿನಿಯ ವಿಶ್ವವಿಖ್ಯಾತ ಮಹಾಕಾಲ್ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ಮಹಾಕಾಲ್ ದೇವಸ್ಥಾನ ಸಮಿತಿಯು ಭಕ್ತರಿಗೆ ಒಂದು ಗಂಟೆಯಲ್ಲಿ ದರ್ಶನ ನೀಡುವ ವ್ಯವಸ್ಥೆ ಮಾಡಿದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕರ್ಕ್ ರಾಜ್ ದೇವಸ್ಥಾನದ ಬಳಿ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಬಹುದು. ನಂತರ ಕಾಲ್ನಡಿಗೆಯಲ್ಲಿ ಗಂಗಾ ಉದ್ಯಾನವನ್ನು ತಲುಪುತ್ತಾರೆ. ಇಲ್ಲಿ ಭಕ್ತರಿಗೆ ಚಪ್ಪಲಿ ಸ್ಟ್ಯಾಂಡ್ ಮತ್ತು ಲಾಕರ್ ಸೌಲಭ್ಯ ದೊರೆಯಲಿದೆ. ನಂತರ ಭಕ್ತರು ಹತ್ತಿರದ ರಸ್ತೆಯಿಂದ ನೇರವಾಗಿ ಚಾರ್ ಧಾಮ್ ದೇವಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ. ಅಲ್ಲಿಂದ ಗೇಟ್ ನಂ.6ರವರೆಗೆ ಭಕ್ತರು ದೇವರ ದರ್ಶನದ ಪ್ರಯೋಜನ ಪಡೆಯಲಿದ್ದಾರೆ.
12 ಜ್ಯೋತಿರ್ಲಿಂಗಗಳ ದರ್ಶನ : ಇಂದು ಭಕ್ತರು 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿ, ಶಿವನ ಆಶೀರ್ವಾದ ಪಡೆಯಲಿದ್ದಾರೆ. ಮೂರು ಹಂತಗಳ (ದ್ವಾರಗಳಲ್ಲಿ/ಬ್ಯಾರಿಕೇಡ್ ವ್ಯವಸ್ಥೆ ಮೂಲಕ) ಮೂಲಕ ಭಕ್ತರಿಗೆ ಪ್ರವೇಶ ನೀಡಲಾಗುವುದು. ಇದರಲ್ಲಿ ಎರಡು ಕಡೆ ಸಾಮಾನ್ಯ ಭಕ್ತರಿಗೆ ಮತ್ತು ಒಂದು ಕಡೆ 250 ರೂಪಾಯಿ ರಸೀದಿ ತೆಗೆದುಕೊಳ್ಳುವವರಿಗೆ ಅವಕಾಶ ಇರುತ್ತದೆ. ಭಕ್ತಾದಿಗಳು ಒಂದು ಗಂಟೆ ಸರದಿಯಲ್ಲಿ ನಿಂತು ದರ್ಶನ ಪಡೆಯಲಿದ್ದಾರೆ. ಈ ಕಾರಣದಿಂದ ದೇವಸ್ಥಾನ ಸಮಿತಿಯವರು ನೀರಿನ ಬಾಟಲಿ ನೀಡುವ ವ್ಯವಸ್ಥೆ ಮಾಡಿದ್ದು, ದರ್ಶನದ ನಂತರ ಎಲ್ಲ ಭಕ್ತರಿಗೆ ಖಿಚಡಿ ಪ್ರಸಾದ ದೊರೆಯಲಿದೆ.
ಪಾರ್ಕಿಂಗ್ ಸೌಲಭ್ಯ : ನಾಲ್ಕು ದಿಕ್ಕಿನಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಉಜ್ಜಯಿನಿಗೆ ಬರುವ ಭಕ್ತರಿಗೆ ಮೊದಲ ಪಾರ್ಕಿಂಗ್ ಅನ್ನು ಕರ್ಕ್ ರಾಜ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. ಅದು ಭರ್ತಿಯಾದ ನಂತರ ತ್ರಿವೇಣಿ ಮ್ಯೂಸಿಯಂ ಬಳಿಯ ಪಾರ್ಕಿಂಗ್ ಮತ್ತು ಕಾರ್ತಿಕ ಮೇಳದ ಮೈದಾನದ ಪಾರ್ಕಿಂಗ್ ಸೇರಿದಂತೆ ಹರಿ ಫಾಟಕ್ ಸೇತುವೆಯ ಬಳಿಯ ಪಾರ್ಕಿಂಗ್ ವ್ಯವಸ್ಥೆ ಅನ್ನು ಬಳಸಬಹುದು.
ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಬಂದಿಳಿಯುವ ಭಕ್ತರು ಮ್ಯಾಜಿಕ್ ವಾಹನ ಮತ್ತು ಇ-ರಿಕ್ಷಾದ ಮೂಲಕ ಚಾರ್ ಧಾಮ್ ಬಳಿ ಹೋಗಲು ಸಾಧ್ಯವಾಗುತ್ತದೆ. ಚಾರ್‌ಧಾಮ್ ದೇವಸ್ಥಾನದಿಂದಲೂ ದರ್ಶನದ ಸಾಲು ಆರಂಭವಾಗಲಿದೆ. ಅಲ್ಲಿಂದ ದರ್ಶನಕ್ಕೆ ಟಿಕೆಟ್ ಲಭ್ಯವಾಗಲಿದ್ದು, ಬಳಿಕ ಭಕ್ತರು ಬ್ಯಾರಿಕೇಡ್ ವ್ಯವಸ್ಥೆ ಮೂಲಕ ದೇವಸ್ಥಾನದ ಒಳಗೆ ತಲುಪಲಿದ್ದಾರೆ.
ಮಹಾಶಿವರಾತ್ರಿಗೆ ವಿಶೇಷ ಲಡ್ಡು : ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಹೆಚ್ಚು ಮಾರಾಟವಾಗುವ ಶುದ್ಧ ಲಡ್ಡು ಪ್ರಸಾದಕ್ಕೆ ವರ್ಷವಿಡೀ ಬೇಡಿಕೆ ಇರುತ್ತದೆ. ಶಿವರಾತ್ರಿಗೆ 100 ಕ್ವಿಂಟಾಲ್ ಲಡ್ಡುಗಳನ್ನು ತಯಾರಿಸಲಾಗುತ್ತದೆ. ನಾಲ್ಕು ದಿನ ಮುಂಚಿತವಾಗಿಯೇ ಸಿದ್ಧತೆ ಆರಂಭಿಸಲಾಗಿತ್ತು. ಇಂದು ಭಕ್ತರು ಲಡ್ಡುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
ಹೋಟೆಲ್ ವ್ಯವಸ್ಥೆ: ಮಹಾಕಾಲ್ ದೇವಸ್ಥಾನದ ಸುತ್ತಲೂ ಸುಮಾರು 400 ಸಣ್ಣ ಮತ್ತು ದೊಡ್ಡ ಹೋಟೆಲ್ ಉದ್ಯಮಿಗಳು ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.