ಸಂಭಾಲ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಸಂಸದ ಸಂಭಾಲ್ ಶಫೀಕುರ್ ರೆಹಮಾನ್ ಬಾರ್ಕ್ ಅವರು ಮತ್ತೊಮ್ಮೆ ಬಿಜೆಪಿ ಕಾರ್ಯವೈಖರಿಯನ್ನು ವಿರೋಧಿಸಿದ್ದಾರೆ. ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಹೆಸರಿಸುವ ಉದ್ದೇಶದ ಹಿಂದೆ ಕೋಮು ಬಣ್ಣವಿದೆ ಎಂದು ದೂರಿದರು.
ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಶನಿವಾರ ಪ್ರಧಾನಿ ನರೇಂದ್ರ ಮೋದಿ, ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುತ್ತದೆ. ಚಂದ್ರಯಾನ -2 ಮಿಷನ್ ಮೂಲಕ ತನ್ನ ಹೆಜ್ಜೆಗುರುತುಗಳನ್ನು ದಾಖಲಿಸಿದ ಸ್ಥಳವನ್ನು 'ತಿರಂಗಾ ಪಾಯಿಂಟ್' ಎಂದು ಕರೆಯಲಾಗುತ್ತದೆ. ಹಾಗೆಯೇ ಆಗಸ್ಟ್ 23 ಅನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದ್ದರು.
ವಿಕ್ರಮ್ ಲ್ಯಾಂಡ್ ಆಗಿರುವ ಸ್ಥಳಕ್ಕೆ 'ಶಿವಶಕ್ತಿ ಪಾಯಿಂಟ್' ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಫೀಕುರ್ ರೆಹಮಾನ್ ಬಾರ್ಕ್, ಬಿಜೆಪಿಯವರು ಯಾಕೆ ಎಲ್ಲವನ್ನೂ ಕೋಮುವಾದ ಮಾಡಬಯಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಬ್ದುಲ್ ಕಲಾಂ ಹೆಸರು ಸೂಕ್ತ- ಬಾರ್ಕ್: ಮೋದಿ ನಿರ್ಧಾರವನ್ನು ವಿರೋಧಿಸಿರುವ ಎಸ್‌ಪಿ ಸಂಸದ, ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳಕ್ಕೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರಿಡಬೇಕಿತ್ತು. ಇಂಥ ಯೋಜನೆಗಳಿಗೆ ಅಡಿಪಾಯ ಹಾಕಿರುವವರೇ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ. ಹಾಗಾಗಿ ಅವರದ್ದೇ ಹೆಸರಿಡಬೇಕು. ಚಂದ್ರನ ಮೇಲಿನ ಈ ಸಾಧನೆಗೆ ಹಿಂದೂ-ಮುಸ್ಲಿಂ ಬಣ್ಣ ಹಚ್ಚಬಾರದಿತ್ತು ಎಂದರು.
ಜನ ಕಲ್ಯಾಣಕ್ಕಾಗಿ 'ಶಿವಶಕ್ತಿ': 'ಶಿವಶಕ್ತಿ' ಅಂಶವು ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನಕಲ್ಯಾಣವು ನಮ್ಮ ಪರಮೋಚ್ಛ ಬದ್ಧತೆ" ಎಂದು ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಕೇಂದ್ರದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಕ್ರಂ ಲ್ಯಾಂಡರ್ ಮಾದರಿ, ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಉಡುಗೊರೆಯಾಗಿ ನೀಡಿದ್ದಾರೆ. (ಪಿಟಿಐ)
ಇದನ್ನೂ ಓದಿ: ಚಂದ್ರನ ಬಳಿಕ ಸೂರ್ಯನತ್ತ ಚಿತ್ತ ಹರಿಸಿದ ಇಸ್ರೋ: ಸೆಪ್ಟೆಂಬರ್ ಮೊದಲ ವಾರ ಆದಿತ್ಯ ಎಲ್ 1 ಉಡಾವಣೆ