ಚೆನ್ನೈ/ತಮಿಳುನಾಡು: ಊರಿಗೆ ವಾಪಸ್ ತೆರಳಲು ಬಯಸುವ ವಲಸೆ ಕಾರ್ಮಿಕರಿಗೆ ವಿಶೇಷ ರೈಲುಗಳನ್ನು ಬಿಡಲು ಅಥವಾ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸುವುದಾಗಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾವು ಶೀಘ್ರದಲ್ಲೇ ವಿಲ್ಲುಪುರಂನಿಂದ ಪುರುಲಿಯಾ ಮತ್ತು ಗೋರಖ್ಪುರಕ್ಕೆ ಎರಡು ವಿಶೇಷ ರೈಲುಗಳನ್ನು ಬಿಡಲಾಗುತ್ತದೆ. ಅದೇ ರೀತಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳದ ಆಧಾರದ ಮೇಲೆ ಇರುವ ಟ್ರೈನ್ಗಳಿಹೆ ಹೆಚ್ಚುವರಿ ಬೋಗಿಗಳನ್ನು ಜೋಡಿಸುತ್ತೇವೆ" ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಗುಗಣೇಶನ್ ಹೇಳಿದ್ದಾರೆ. ಚೆನ್ನೈ ಮೂಲಕ ಚಲಿಸುವ ಅಲೆಪ್ಪಿ-ಧನ್ಬಾದ್ ಎಕ್ಸ್‌ಪ್ರೆಸ್‌ಗೆ ಇತ್ತೀಚೆಗೆ ಎರಡು ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ ಎಂದು ಅವರು ಹೇಳಿದರು. ಮೊದಲೇ ಟಿಕೆಟ್ ಕಾಯ್ದಿರಿಸಿದವರು ಈ ರೈಲುಗಳಲ್ಲಿ ತೆರಳಬಹುದು. ಇನ್ನು ಈಗಾಗಲೇ ಊರುಗಳಿಗೆ ವಾಪಸ್ ತೆರಳಲು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಕೇಂದ್ರ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ.
ತಮಿಳುನಾಡಿನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದ್ದರೂ ದಕ್ಷಿಣ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುವ ಅಥವಾ ಆಗಮಿಸುವ ರೈಲುಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ನಾವು ರಾಜ್ಯ ಸರ್ಕಾರದಿಂದ ಯಾವುದೇ ಮನವಿಯನ್ನು ಸ್ವೀಕರಿಸಿಲ್ಲ. ರೈಲುಗಳು ವಿವಿಧ ರಾಜ್ಯಗಳ ಮೂಲಕ ಸಂಚರಿಸುತ್ತವೆ. ಆದ್ದರಿಂದ ಅವುಗಳ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇನ್ನು ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಈಗ 299 ಬೋಗಿಗಳನ್ನು ಕೋವಿಡ್ -19 ವಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ ಮತ್ತು ಅವುಗಳನ್ನು ಅಗತ್ಯ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಗುಗಣೇಶನ್ ತಿಳಿಸಿದ್ದಾರೆ.