ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ನಿತ್ಯ ಸಾವಿರಾರು ಜನರು ಮಾಹಾಮಾರಿಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀತಿ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದು, ಒಂದೇ ದರ ನಿಗದಿ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಸೋನಿಯಾ ಗಾಂಧಿ ಒತ್ತಾಯ ಮಾಡಿದ್ದಾರೆ.
ಕೊರೊನಾ ಲಸಿಕೆಗೆ ಏಕರೂಪದ ದರ ನಿಗದಿ ಮಾಡಿ ಎಂದಿರುವ ಸೋನಿಯಾ ಗಾಂಧಿ, ಕೇಂದ್ರಕ್ಕೆ ಒಂದು ದರ, ರಾಜ್ಯಕ್ಕೆ ಮತ್ತೊಂದು ದರ ಏಕೆ ಎಂದು ಪ್ರಶ್ನೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿನ ದರದ ವಿಚಾರವಾಗಿ ಸಹ ಅಸಮಾಧಾನ ಹೊರಹಾಕಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸರಬರಾಜು ತೊಂದರೆಯಾಗಿದ್ದು, ಔಷಧಗಳ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ತಕ್ಷಣವೇ ಈ ನೀತಿ ಪುನರ್ ಪರಿಶೀಲನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮೇ. 1ರಿಂದ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಅದಕ್ಕೋಸ್ಕರ ಸರ್ಕಾರ ಹೊಸ ಲಸಿಕೆ ನೀತಿ ಜಾರಿಗೆ ತಂದಿದೆ.
ಪ್ರತಿ ಡೋಸ್ಗೆ ಕೇಂದ್ರ ಸರ್ಕಾರಕ್ಕೆ 150 ರೂ, ರಾಜ್ಯ ಸರ್ಕಾರಗಳಿಗೆ 400 ರೂ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600ರೂ ದರ ನಿಗದಿ ಮಾಡಲಾಗಿದ್ದು, ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50ರಷ್ಟು ಕೇಂದ್ರಕ್ಕೆ ಹೋಗಲಿದೆ. ಇದೇ ವಿಚಾರವಾಗಿ ಪತ್ರದಲ್ಲಿ ಬರೆದಿರುವ ಸೋನಿಯಾ ಲಸಿಕೆಗೆ ಏಕರೂಪದ ಬೆಲೆ ನಿಗದಿಯಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.