ನವದೆಹಲಿ: ಮುಂದಿನ ಲೋಕಸಭೆ ಚುನಾವಣೆವರೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯುತ್ತಾರೆ. ಇದೇ ವೇಳೆ, ಪಕ್ಷದಲ್ಲಿನ ಕೆಲವು ಹಿರಿಯ ನಾಯಕರಿಗೆ ಮಹತ್ವದ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರಾಹುಲ್ ಗಾಂಧಿ ಅವರಿಗೆ ಪುನಃ ಅಧ್ಯಕ್ಷಗಿರಿ ವಹಿಸಿಕೊಳ್ಳಲು ಇಷ್ಟವಿಲ್ಲದ ಕಾರಣ, ಸೋನಿಯಾ ಅವರನ್ನೇ ಹುದ್ದೆಯಲ್ಲಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಆದರೆ ಸೋನಿಯಾ ಗಾಂಧಿಯವರಿಗೆ ಪುತ್ರ ರಾಹುಲ್ ಸಲಹೆಗಾರರಾಗಿ ಇರುತ್ತಾರೆ. ಗುಲಾಂ ನಬಿ ಆಜಾದ್, ಸಚಿನ್ ಪೈಲಟ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್ ಹಾಗೂ ರಮೇಶ್ ಚಿನ್ನತಿಹಾಲ್ ಅವರನ್ನು ಕಾರ್ಯಾಧ್ಯಕ್ಷ (Working Presidents) ಸ್ಥಾನಕ್ಕೆ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಉತ್ತರ ಪ್ರದೇಶದ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಯಾವ ಸ್ಥಾನ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಕೆಲವೊಂದು ಮೂಲಗಳ ಪ್ರಕಾರ, ಮುಂದಿನ ವರ್ಷ ಯುಪಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಇವರು ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಜ್ಯ ಗೆದ್ದ ಬಳಿಕ ಕೇಂದ್ರದತ್ತ ಗುರಿ ಇಟ್ಟ ಮಮತಾ: 'ಲೋಕ' ಸಮರಕ್ಕೆ ವಿಪಕ್ಷಗಳ ಒಗ್ಗೂಡಿಸುವ ಪ್ಲಾನ್
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡ ಕಾರಣ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ನಡೆದಿತ್ತು. ಆದರೆ ಕೋವಿಡ್ ಕಾರಣ ಪಕ್ಷ ಯಾವುದೇ ಸಭೆ ನಡೆಸಿಲ್ಲ. ಮುಂದಿನ ವರ್ಷ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿ, ಪಕ್ಷದ ಯುವ ಮುಖಂಡರಿಗೂ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ. ಅದೇ ಕಾರಣಕ್ಕಾಗಿ ಪಂಜಾಬ್ನಲ್ಲಿ ನವಜೋತ್ ಸಿಂಗ್ ಸಿಧುಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ.