ಪಣಜಿ(ಗೋವಾ): ಗೋವಾದಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಪ್ರತಿಪಕ್ಷದ ನಾಯಕ ಸ್ಥಾನದಿಂದ ಮೈಕಲ್ ಲೋಬೋ ಅವರನ್ನು ಪಕ್ಷ ಈಗಾಗಲೇ ಕೆಳಗಿಳಿಸಿದೆ. ಇದಾದ ಬಳಿಕ ಲೋಬೋ ತಮ್ಮ ಪತ್ನಿಯೊಂದಿಗೆ ಮುಖ್ಯಮಂತ್ರಿ ಸಾವಂತ್ರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ, ಗೋವಾದಲ್ಲಿ 2019ರ ಬೆಳವಣಿಗೆ ಪುನರಾವರ್ತನೆಯಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ಬಿಕ್ಕಟ್ಟು ಕಂಡ ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಸಂಸದ ಮುಕುಲ್ ವಾಸ್ನಿಕ್ರನ್ನು ರಾತ್ರೋರಾತ್ರಿ ಪಣಜಿ ಕಳುಹಿಸಿದ್ದಾರೆ.
1. ಬಿಜೆಪಿ ಸೇರಲು ಬಯಸಿದ ಶಾಸಕರು: ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ 6 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಇದಾದ ನಂತರ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಮ್ಮದೇ ಇಬ್ಬರು ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
2. ಗುಂಡೂರಾವ್ ಹೇಳಿದ್ದೇನು?: ಕರಾವಳಿ ರಾಜ್ಯದಲ್ಲಿ ಪಕ್ಷವನ್ನು ದುರ್ಬಲಗೊಳಿಸಲು ಮತ್ತು ಪಕ್ಷಾಂತರ ಮಾಡಲು ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ನೇತೃತ್ವದಲ್ಲಿ ಸಂಚು ರೂಪಿಸಲಾಗಿದೆ. ಮೈಕೆಲ್ ಲೋಬೋರನ್ನು ಗೋವಾದ ಪ್ರತಿಪಕ್ಷ ನಾಯಕನ ಸ್ಥಾನದಿಂದ ತಕ್ಷಣವೇ ತೆಗೆದುಹಾಕಲಾಗಿದೆ. ದಿಗಂಬರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗುಂಡೂರಾವ್ ಹೇಳಿದರು.
3. ಮುಖ್ಯಮಂತ್ರಿ ಭೇಟಿಯಾದ ಲೋಬೋ: ಪ್ರತಿಪಕ್ಷ ನಾಯಕ ಸ್ಥಾನದಿಂದ ವಜಾಗೊಂಡಿರುವ ಶಾಸಕ ಮೈಕಲ್ ಲೋಬೋ ಹಾಗು ಪತ್ನಿ ದೇಲಿಲಾ ಲೋಬೋ ಮುಖ್ಯಮಂತ್ರಿ ಪ್ರಮೋದ್ ಸಾವಂತ್ರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಸೇರಲು ಬಯಸುವ ಶಾಸಕರಲ್ಲಿ ದೇಲೀಲಾ ಹೆಸರೂ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿಗೆ ಸೇರುವ ವದಂತಿ: ಗೋವಾ ಪ್ರತಿಪಕ್ಷದ ನಾಯಕನ ವಜಾಗೊಳಿಸಿದ ಕಾಂಗ್ರೆಸ್
4. ಸಿಎಂ ಸಾವಂತ್ ಹೇಳಿದ್ದೇನು?: ಪ್ರಮೋದ್ ಸಾವಂತ್ ಪ್ರತಿಕ್ರಿಯಿಸಿ, ವಿಧಾನಸಭೆ ಅಧಿವೇಶನಕ್ಕೂ ಮುನ್ನ ಜನರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಇದು ಸಾಮಾನ್ಯ. ಅಧಿವೇಶನದ ತಯಾರಿಯಲ್ಲಿ ನಾನು ನಿರತನಾಗಿದ್ದು, ಬೇರೆ ಪಕ್ಷದ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಜಾಣ್ಮೆಯ ಉತ್ತರ ನೀಡಿದರು.
5. ದಿಗ್ವಿಜಯ್ ಸಿಂಗ್ ಆಕ್ರೋಶ: ಇದು ಪ್ರಜಾಪ್ರಭುತ್ವವಲ್ಲ, ಕೇಸರಿ ಪಕ್ಷದ ‘ಹಣಬಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ. ಬಿಜೆಪಿ ಸೇರುವ ಪೈಕಿ ಎಷ್ಟು ಶಾಸಕರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಯಿಂದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಕಿಡಿ ಕಾರಿದರು.
6. ಸದ್ಯ ಕಾಂಗ್ರೆಸ್ ಶಾಸಕರು ಎಲ್ಲಿದ್ದಾರೆ?: ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿದೆ. ಆದರೆ ಇದೀಗ ಲೋಬೋ, ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಲ್ದೇಸಾಯಿ ಮತ್ತು ದೆಲಿಯಾಲಾ ಲೋಬೋ ಸೇರಿದಂತೆ ಐವರು ಶಾಸಕರು ಅಜ್ಞಾತವಾಸಕ್ಕೆ ತೆರಳಿದ್ದಾರೆ. ಇತರ ಐವರು ಶಾಸಕರಾದ ಅಲ್ಟೋನ್ ಡಿ'ಕೋಸ್ಟಾ, ಸಂಕಲ್ಪ್ ಅಮೋನ್ಕರ್, ಯೂರಿ ಅಲೆಮಾವೋ, ಕಾರ್ಲೋಸ್ ಅಲ್ವಾರೆಸ್ ಫೆರೇರಾ, ರುಡಾಲ್ಫ್ ಫರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 6ನೇ ಶಾಸಕ ಅಲೆಕ್ಸೊ ಸಿಕ್ವೇರಾ ಪಕ್ಷದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ.
7. 2019ರಲ್ಲಿ ನಡೆದಿದ್ದೇನು?: 2019ರಲ್ಲಿ 15 ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಬಿಜೆಪಿ ಸೇರಿದ್ದರು. ಅದರಲ್ಲಿ ಪ್ರತಿಪಕ್ಷ ನಾಯಕರೂ ಸೇರಿದ್ದರು. ಪಕ್ಷದ ಒಟ್ಟು ಶಾಸಕರ ಪೈಕಿ ಮೂರನೇ ಎರಡರಷ್ಟಿದ್ದ ಅವರಿಗೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗಲಿಲ್ಲ.
8. ಗೋವಾ ವಿಧಾನಸಭೆ ಚಿತ್ರಣ: ಗೋವಾ ವಿಧಾನಸಭೆಯಲ್ಲಿ 40 ಸ್ಥಾನಗಳಿವೆ. ಕಾಂಗ್ರೆಸ್ 11 ಮತ್ತು ಬಿಜೆಪಿ 20 ಶಾಸಕರನ್ನು ಹೊಂದಿದೆ. ಇದಲ್ಲದೆ, ಮಹಾರಾಷ್ಟ್ರ ಗೋಮಾಂತಕ್ ಪಕ್ಷವು 2 ಶಾಸಕರು, 3 ಪಕ್ಷೇತರರನ್ನು ಹೊಂದಿದೆ.