ನವದೆಹಲಿ: ರಾಷ್ಟ್ರವ್ಯಾಪಿ ಜಾತಿ ಜನಗಣತಿ ನಡೆದುವುದನ್ನು ತಾವು ಶೇಕಡಾ ನೂರರಷ್ಟು ಬೆಂಬಲಿಸುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೋಮವಾರ ಹೇಳಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ. "ನಾನು ಶೇಕಡಾ ನೂರರಷ್ಟು ಜಾತಿ ಜನಗಣತಿಯ ಪರವಾಗಿದ್ದೇನೆ. ನಾವು ಇದನ್ನು ಮಾಡಲೇಬೇಕಿದೆ. ಇದು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ" ಎಂದು ಸೋನಿಯಾ ಹೇಳಿದರು.
ಜಾತಿ ಜನಗಣತಿ ನಡೆಸುವ ಪರವಾಗಿ ಇಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದು, ತಾನು ಅಧಿಕಾರಕ್ಕೆ ಬಂದಲ್ಲಿ 2021 ರಲ್ಲಿ ನಡೆಯಬೇಕಿದ್ದ ಸಾಮಾನ್ಯ ಜನಗಣತಿಯ ಭಾಗವಾಗಿ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಕೂಡ ಪಕ್ಷ ಭರವಸೆ ನೀಡಿದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.
"ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನದ ವಿಷಯದಲ್ಲಿ ಮೋದಿ ಸರ್ಕಾರ ವಿಧಿಸಿರುವ ಜನಗಣತಿ ಮತ್ತು ಡಿಲಿಮಿಟೇಶನ್ನ ಅನಗತ್ಯ ಅಡೆತಡೆಗಳನ್ನು ತೆಗೆದುಹಾಕಲಾಗುವುದು" ಎಂದು ಸಿಡಬ್ಲ್ಯೂಸಿ ನಿರ್ಣಯದಲ್ಲಿ ತಿಳಿಸಲಾಗಿದೆ. ಜನಸಂಖ್ಯೆಯಲ್ಲಿ ಅವರ ಅನುಪಾತಕ್ಕೆ ಅನುಗುಣವಾಗಿ ಒಬಿಸಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಶೇಕಡಾ 50 ರ ಮಿತಿಯನ್ನು ಶಾಸನದ ಮೂಲಕ ತೆಗೆದುಹಾಕಬೇಕೆಂದು ಪಕ್ಷ ಕರೆ ನೀಡಿದೆ.
ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳ ಮೂಲಕ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ. ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಆರಂಭಿಕವಾಗಿ ಮಾತನಾಡಿದ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡದಿರುವ ಕ್ರಮವನ್ನು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳುಗಳಿಂದ ತುಂಬಿದ ಮೋದಿ ಅವರ ಆಧಾರರಹಿತ ಆರೋಪಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಲಿವೆ. ನಾವು ಈ ಸುಳ್ಳುಗಳನ್ನು ಎದುರಿಸಬೇಕಿದೆ ಮತ್ತು ನಮ್ಮದೇ ಆದ ಪ್ರತಿ ನಿರೂಪಣೆಯನ್ನು ರಚಿಸುವುದು ಅತ್ಯಗತ್ಯ ಎಂದು ಖರ್ಗೆ ಹೇಳಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲಾಗುವುದು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಇದನ್ನು (ಒಬಿಸಿ) ವಿಸ್ತರಿಸಲಾಗುವುದು. 2024 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿ ನಡೆಸಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.
ಇದನ್ನೂ ಓದಿ : ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದ ಸರ್ಕಾರಿ ಬ್ಯಾಂಕುಗಳ ಷೇರುಗಳೇ ಬೆಸ್ಟ್: ಎಸ್&ಪಿ ವರದಿ