ಕೊಚ್ಚಿ: ಮುಂದಿನ ತಿಂಗಳು ನಡೆಯಲಿರುವ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೊಬ್ಬರಿಗೂ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ನಾಯಕ ರಾಹುಲ್ ಗಾಂಧಿ ಅವರ ಅನುಮತಿ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಭಾರತ್ ಜೋಡೋ ಯಾತ್ರೆಯ ಮೊದಲ ಮತ್ತು ಎರಡನೇ ಹಂತದ ನಡುವಿನ ವಿರಾಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 10 ಪಿಸಿಸಿ ಪ್ರತಿನಿಧಿಗಳ ಬೆಂಬಲ ಇರುವ ಯಾರೇ ಆದರೂ ಮುಕ್ತವಾಗಿ ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದರು.
ನಾಮಪತ್ರ ಸಲ್ಲಿಸಲು ಯಾರಿಗೂ ಕಾಂಗ್ರೆಸ್ ಅಧ್ಯಕ್ಷೆ ಅಥವಾ ರಾಹುಲ್ ಗಾಂಧಿ ಅವರ ಅನುಮತಿ ಅಗತ್ಯವಿಲ್ಲ. ಚುನಾವಣೆಗಳು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರುತ್ತದೆ. ಕಾಂಗ್ರೆಸ್ ಬಿಟ್ಟರೆ ದೇಶದ ಯಾವುದೇ ರಾಜಕೀಯ ಪಕ್ಷವು ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವುದಿಲ್ಲ. ಆದರೆ, ಕಾಮರಾಜ್ ಮಾದರಿಯಲ್ಲಿ ಒಮ್ಮತದ ಆಧಾರದ ಮೇಲೆ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ನಂಬಿಕೆ ಇದೆ ಎಂದು ಜೈರಾಮ್ ರಮೇಶ್ ತಿಳಿಸಿದರು.
ಒಂದು ಕಾಲದ ಕಾಂಗ್ರೆಸ್ ಪಕ್ಷದ ದಿಗ್ಗಜ ನೇತಾರ ಕೆ. ಕಾಮರಾಜ್ ಅವರ ಸಿದ್ಧಾಂತ ಸ್ಮರಿಸಿದ ಅವರು, ಎಲ್ಲರೊಂದಿಗೆ ಮಾತನಾಡಿ ಸೂಕ್ತ ಒಮ್ಮತದ ಆಯ್ಕೆಯನ್ನು ಕಂಡುಕೊಳ್ಳಿ. ಒಮ್ಮತ ಸಾಧ್ಯವಾಗದಿದ್ದರೆ ಚುನಾವಣೆ ಅಪೇಕ್ಷಣೀಯ. ನಾವು ಚುನಾವಣೆಯಿಂದ ಓಡಿ ಹೋಗುವುದಿಲ್ಲ, ಯಾರೆಲ್ಲ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ನಾಮಪತ್ರ ಸಲ್ಲಿಸುವ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಸಲ್ಲಿಸಿದರೆ ರಾಜಸ್ಥಾನದಲ್ಲಿ ಏನಾಗಲಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಜೈರಾಮ್ ರಮೇಶ್ ಹೇಳಿದರು.
ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ರಮೇಶ್, ಸೆಪ್ಟೆಂಬರ್ 23 ಯಾತ್ರೆಗೆ ವಿಶ್ರಾಂತಿ ದಿನವಾಗಿದೆ ಮತ್ತು ರಾಹುಲ್ ಗಾಂಧಿ ಅವತ್ತು ದೆಹಲಿಗೆ ಹೋಗಬಹುದು. ಕೆಲ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಿರುವ ತಾಯಿಯನ್ನು ಭೇಟಿಯಾಗಲು ಅವರು ದೆಹಲಿಗೆ ಹೋಗಬಹುದು ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್